ಹಳಿಯಾಳ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಚಿಬ್ಬಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಗನಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ನೀರು ನಿಲ್ಲಲು ಒಡ್ಡು, ಮೀನು ಹೊರಹೋಗದಂತೆ ತಡೆಯಲು ಜಾಳಿಗೆ ನಿರ್ಮಿಸಲು ಗ್ರಾಮಸ್ಥರೇ ಶ್ರಮದಾನ ಆರಂಭಿಸಿದ್ದಾರೆ.
ಸುಮಾರು ಏಳೂವರೆ ಎಕರೆ ವಿಸ್ತಾರವಾದ ಕೆರೆಯಲ್ಲಿ ಒಡ್ಡು ನಿರ್ಮಿಸುವ ಜೊತೆಗೆ ಮೀನುಗಳು ಕೆರೆಯಿಂದ ಹೊರ ಹೋಗದಂತೆ ತಡೆಯಲು 1 ರಿಂದ 12 ಅಡಿ ಎತ್ತರ ಜಾಳಿಗೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ತೇಗನಳ್ಳಿ ಗ್ರಾಮದ ಹತ್ತಾರು ಗ್ರಾಮಸ್ಥರು ಈ ಕೆಲಸದಲ್ಲಿ ನಿರತರಾಗಿದ್ದಾರೆ.
ಕೆಲ ವರ್ಷಗಳಿಂದ ಹಿಂದೆ ಕೆರೆಯಲ್ಲಿ ನೀರು ಬತ್ತುತ್ತಿದೆ. ಮಳೆಯಾದರೂ ಕೆರೆಗಳಿಗೆ ಒಡ್ಡು ಇಲ್ಲದ ಕಾರಣ ನೀರು ನಿಲ್ಲದೆ ಹರಿದು, ಬರಿದಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೆಲ ವರ್ಷದ ಹಿಂದೆ ಶ್ರಮದಾನದ ಮೂಲಕ ಒಡ್ಡು ನಿರ್ಮಿಸಿದ್ದರು. ಕಳೆದ ವರ್ಷ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಕೆಲಸವೂ ನಡೆದಿತ್ತು.
‘ಕೆರೆ ಅಭಿವೃದ್ಧಿಪಡಿಸಿದ ಬಳಿಕ ನೀರು ಸಂಗ್ರಹಣೆ ಉತ್ತಮವಾಗಿದೆ. ಕಳೆದ ವರ್ಷ ಹೊಸಪೇಟೆ, ಇನ್ನಿತರ ಕಡೆಗಳಿಂದ ಸುಮಾರು ₹80–90 ಸಾವಿರ ವೆಚ್ಚ ಮಾಡಿ ಮೀನು ಮರಿಗಳನ್ನು ತಂದು ಬಿಡಲಾಯಿತು. ಬೆಳವಣಿಗೆ ಹೊಂದಿದ ಮೀನುಗಳನ್ನು ಗ್ರಾಮಸ್ಥರೇ ಹಿಡಿದು ಮಾರಾಟ ಮಾಡಿ, ಬಂದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸುತ್ತಿದ್ದೇವೆ. ಈ ಮೊತ್ತದಲ್ಲಿ ಗ್ರಾಮ ಪಂಚಾಯಿತಿಗೂ ಶುಲ್ಕ ಭರಿಸಲಾಗುತ್ತಿದೆ’ ಎಂದು ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ನಾರಾಯಣ ಬಿಷ್ಟಪ್ಪ ಗೌಡ ಹೇಳಿದರು.
‘ಕಳೆದ ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕೆರೆಗಳಲ್ಲಿ ನೀರು ಭರ್ತಿಯಾಗತೊಡಗಿದೆ. ಇದರಿಂದ ಕೆರೆಯಲ್ಲಿರುವ ನೀರಿನ ಜೊತೆ ಮೀನುಗಳು ಹರಿದು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಒಡ್ಡು ನಿರ್ಮಿಸಲಾಗುತ್ತಿದೆ. ಕೆರೆಯ ಕೋಡಿಗೆ ಹೊಂದಿಕೊಂಡು ಎತ್ತರದ ಜಾಳಿಗೆಯನ್ನು ನಿರ್ಮಿಸಿ ಮೀನುಗಳು ಹೊರ ಸಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
ಕಳೆದ 3 ವರ್ಷಗಳಿಂದ ಗ್ರಾಮಸ್ಥರೆಲ್ಲರೂ ಸೇರಿ ಸಂಘಟಿತರಾಗಿ ಶ್ರಮದಾನ ನಡೆಸುತ್ತಿದ್ದೇವೆ. ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿದೆ-ನಾರಾಯಣ ಬಿಷ್ಟಪ್ಪ ಗೌಡ, ಅಧ್ಯಕ್ಷ ಲಕ್ಷ್ಮಿದೇವಿ ದೇವಸ್ಥಾನ ಟ್ರಸ್ಟ್ ಸಮಿತಿ
ಗ್ರಾಮದಲ್ಲಿ ಪ್ರತಿ ಮಂಗಳವಾರ ಗ್ರಾಮಸ್ಥರೆಲ್ಲ ಸೇರಿ ಶ್ರಮದಾನ ಮಾಡುತ್ತೇವೆ. ಗ್ರಾಮಕ್ಕೆ ಅಗತ್ಯವಿರುವ ಮೂಲಸೌಲಭ್ಯ ಒದಗಿಸಲು ಶ್ರಮಿಸುತ್ತೇವೆ. ಪ್ರತಿ ಮನೆಯಿಂದ ಒಬ್ಬರು ಪಾಲ್ಗೊಳ್ಳುತ್ತಾರೆ.-ಅರ್ಜುನ ನಾರಾಯಣ ಸಾವಂತ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.