ADVERTISEMENT

ವಿಶ್ವಾಸ ಮತಕ್ಕೆ ಸಮಯ ನಿಗದಿ: ಸರ್ಕಾರದ ಅಳಿವು ಉಳಿವು ಗುರುವಾರ ನಿರ್ಧಾರ 

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 9:12 IST
Last Updated 15 ಜುಲೈ 2019, 9:12 IST
   

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಸರ್ಕಾರದ ಅಳಿವು ಉಳಿವು ಅಂದೇ ನಿರ್ಧಾರವಾಗಲಿದೆ.

ಮೈತ್ರಿಕೂಟದ ಶಾಸಕರ ಭಿನ್ನಮತೀಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಿಎಂ ಎಚ್ಡಿಕೆ ತಾವು ವಿಶ್ವಾಸ ಮತಯಾಚನೆ ಮಾಡುವುದಾಗಿ ಶುಕ್ರವಾರ ಸದನದಲ್ಲಿ ಘೋಷಿಸಿದ್ದರು. ಇದಕ್ಕೆ ಆರಂಭದಲ್ಲಿ ಬಿಜೆಪಿ ವಿರೋಧಿಸಿತ್ತಾದರೂ, ಸೋಮವಾರ ಸ್ವತಃ ಬಿಜೆಪಿ ನಾಯಕರೇ ಅವಿಶ್ವಾಸ ಮಂಡನೆಗೆ ಸ್ಪೀಕರ್‌ ಬಳಿ ನೋಟಿಸ್‌ ನೀಡಿದರು. ಅದರಂತೆ ಸಿಎಂ ಎಚ್ಡಿಕೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರನ್ನು ಒಳಗೊಂಡ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡಬೇಕು ಎಂದುಒಂದು ತಾಸಿನ ಈ ಸಭೆಯಲ್ಲಿ ತೀರ್ಮಾನವಾಯಿತು.

ಇಂದೇ (ಸೋಮವಾರ) ವಿಶ್ವಾಸಮತ ಕೋರಬೇಕು ಎಂದು ಬಿಜೆಪಿ ಮೊದಲು ಪಟ್ಟು ಹಿಡಿದಿತ್ತು. ಮೈತ್ರಿ ಕೂಟದ ನಾಯಕರು ಶುಕ್ರವಾರ ನಿಗದಿ ಮಾಡಬೇಕಾಗಿ ಒತ್ತಾಯಿಸಿದರು. ಮಂಗಳವಾರ ಸುಪ್ರೀಂಕೋರ್ಟ್‌ ತೀರ್ಪು ಗಮನಿಸಿದ ನಂತರ ವಿಶ್ವಾಸಮತ ಕೋರುವುದು ಒಳಿತು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು. ಕೊನೆಗೆ ಗುರುವಾರ ಬೆಳಿಗ್ಗೆ 11ಕ್ಕೆ ವಿಶ್ವಾಸಮತ ಮಂಡಿಸುವ ವಿಚಾರ ಅಂತಿಮವಾಯಿತು ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ADVERTISEMENT

‘ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಕೋರುತ್ತೇವೆ. ಗೆಲ್ಲುವ ವಿಶ್ವಾಸ ಇರುವುದರಿಂದಲೇ ನಾವು ವಿಶ್ವಾಸಮತ ಕೋರುತ್ತೇವೆ ಎಂದು ಹೇಳಿದ್ದೇವೆ,’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.