ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ
ಬೆಂಗಳೂರು: 'ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿಯಿದೆ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಆಗಸ್ಟ್ 05ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ರಾಹುಲ್ ಹೇಳಿದ್ದೇನು?
'ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಈ ಭಯಂಕರ ಮತ ಕಳ್ಳತನದ ‘ಕಾರ್ಯ ವಿಧಾನ’ವನ್ನು ಶೀಘ್ರದಲ್ಲೇ ಯಥಾವತ್ತಾಗಿ ಚುನಾವಣಾ ಆಯೋಗ ಮತ್ತು ಜನರ ಮುಂದಿಡುತ್ತೇವೆ' ಎಂದು ಹೇಳಿದ್ದರು.
'ನಾವು ಕರ್ನಾಟಕದಲ್ಲಿ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಆಳವಾದ ಅಧ್ಯಯನ ನಡೆಸಿದೆವು. ಇಡೀ ಕ್ಷೇತ್ರದ ಮತದಾರರ ಪಟ್ಟಿಯನ್ನು (ಡಿಜಿಟಲ್) ತೆಗೆದುಕೊಂಡು ಅದನ್ನು ವಿಶ್ಲೇಷಣೆಗೆ ಒಳಪಡಿಸಿದೆವು. ಇದಕ್ಕೆ 6 ತಿಂಗಳು ಸಮಯ ಬೇಕಾಯಿತು. ಈ ವಿಶ್ಲೇಷಣೆಯ ಮೂಲಕ, ‘ಅವರು’ ಮತದಾರರ ಪಟ್ಟಿಯಲ್ಲಿ ಹೇಗೆ ಅಕ್ರಮ ಎಸಗುತ್ತಾರೆ, ಹೊಸ ಮತದಾರರನ್ನು ಹೇಗೆ ಸೇರ್ಪಡೆ ಮಾಡುತ್ತಾರೆ, ಅವರನ್ನು ಎಲ್ಲಿಂದ ಕರೆತರುತ್ತಾರೆ ಎಂಬುದು ಸೇರಿದಂತೆ ‘ಅವರ’ ಮತ ಕಳ್ಳತನದ ಸಂಪೂರ್ಣ ಕಾರ್ಯ ವಿಧಾನವನ್ನೇ ತಿಳಿದುಕೊಂಡಿದ್ದೇವೆ' ಎಂದಿದ್ದರು.
‘ಅವರ’ ಆಟವನ್ನು ಕಾಂಗ್ರೆಸ್ ತಿಳಿದುಕೊಂಡಿದೆ ಎನ್ನುವುದು ಈಗ ಚುನಾವಣಾ ಆಯೋಗಕ್ಕೂ ಗೊತ್ತಾಗಿದೆ. ಹೀಗಾಗಿಯೇ ‘ಎಸ್‌ಐಆರ್’ ಮೂಲಕ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿ ಹಾಕುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಭಾರತದಲ್ಲಿ ಇಡೀ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಇದು ಭಾರತದ ವಾಸ್ತವ’ ಎಂದ ರಾಹುಲ್ ಗಾಂಧಿ, ‘ಎಸ್‌ಐಆರ್’ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರೆಗೆ ಹೋರಾಟ ನಡೆಸಲಾಗುವುದು’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.