ADVERTISEMENT

ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ

ಮಾಧ್ವ ಮಠದ ಯತಿಗಳ ಉಪಸ್ಥಿತಿ: ಭಕ್ತರಿಂದ ಶ್ರಮದಾನ; ಗುರುವಾರ ರಾತ್ರಿಪೂರ ನಡೆದ ನಿರ್ಮಾಣ ಕಾರ್ಯ

ಸಿದ್ದನಗೌಡ ಪಾಟೀಲ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
ಪುನರ್‌ ನಿರ್ಮಿಸಿದ ವ್ಯಾಸರಾಜ ತೀರ್ಥರ ವೃಂದಾವನವನ್ನು ತುಂಗಭದ್ರೆಯ ನೀರಿನಿಂದ ಸ್ವಚ್ಛಗೊಳಿಸಲಾಯಿತು. -ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಪುನರ್‌ ನಿರ್ಮಿಸಿದ ವ್ಯಾಸರಾಜ ತೀರ್ಥರ ವೃಂದಾವನವನ್ನು ತುಂಗಭದ್ರೆಯ ನೀರಿನಿಂದ ಸ್ವಚ್ಛಗೊಳಿಸಲಾಯಿತು. -ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ   

ಆನೆಗೊಂದಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಜರ ವೃಂದಾವನ ಪುನರ್‌ ನಿರ್ಮಾಣ ಕಾರ್ಯ ಶುಕ್ರವಾರ ಪೂರ್ಣಗೊಂಡಿತು.

ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು, ಮೈಸೂರು ವ್ಯಾಸರಾಜ (ಸೋಸಲೆ) ಮಠದ ವಿದ್ಯಾಶ್ರೀಶ ತೀರ್ಥರು, ಉತ್ತರಾದಿ ಮಠದ ಸತ್ಯಾತ್ಮತೀರ್ಥರು, ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥರು, ಸೋಸಲೆಮಠದ ಕಿರಿಯ ಶ್ರೀ ವಿದ್ಯಾಮನೋಹರ ತೀರ್ಥರು ಸ್ಥಳದಲ್ಲಿಯೇ ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು.

ವೃಂದಾವನ ನಿರ್ಮಾಣಕ್ಕೆ ಸಿಮೆಂಟ್ ಬದಲು ಬೆಲ್ಲದ ನೀರು, ಸುಣ್ಣ, ಮರಳು, ಪುಂಡಿ ನಾರು ಮಿಶ್ರಿತ ಗಾರೆಯನ್ನು ಬಳಸಲಾಯಿತು.

ADVERTISEMENT

ಬೆಳಿಗ್ಗೆ 6 ಗಂಟೆಯಿಂದಲೇ ನವವೃಂದಾವನದಲ್ಲಿ ಯಜ್ಞಯಾಗಾದಿಗಳು ನಡೆದವು. 50ಕ್ಕೂ ಹೆಚ್ಚು ಪಂಡಿತರಿಂದ ಪವಮಾನ, ನವಗ್ರಹ, ವಿರಾಜಮಂತ್ರ, ನರಸಿಂಹ ಮಂತ್ರ, ತತ್ವ ಹೋಮ ನಡೆದವು. ಮತ್ತೊಂದೆಡೆ ವೃಂದಾವನಕ್ಕೆ ಬಂದ ಭಕ್ತರು ಅಷ್ಟೋತ್ತರ ಪಾರಾಯಣ ಮೂಲಕ ಮಂತ್ರ ಪಠಣ ಮಾಡಿದರು.

ಹಂಪಿಯ ಸುತ್ತಮುತ್ತಲಿನ ಪರಿಸರ, ಅಲ್ಲಿನ ಸ್ಮಾರಕಗಳ ಬಗ್ಗೆ ಅಧ್ಯಯನ ನಡೆಸಿರುವ ಮುಂಬೈನ ವಾಸ್ತುಶಿಲ್ಪಿನೀರಜ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಭಕ್ತರುಗುರುವಾರ ರಾತ್ರಿಯಿಂದಲೇ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಜೊತೆಗೆ ವೃಂದಾವನದ ಸುತ್ತಲೂ ಕಲಾಕೃತಿಗಳ ಕೆತ್ತನೆ ಮಾಡಲು ತಮಿಳುನಾಡಿನ ವೆಲ್ಲೂರಿನಿಂದ ನುರಿತ ಶಿಲ್ಪಿಗಳನ್ನು ಕರೆಸಲಾಗಿತ್ತು. ರಾಘವ ಪ್ರಭ ನೇತೃತ್ವದ ಐವರ ತಂಡ ವೃಂದಾವನದ ಸುತ್ತಲೂ ಕಲಾಕೃತಿಗಳ ಕೆತ್ತನೆ ಕಾರ್ಯ ಮಾಡಿತು.

ಸಂಜೆ 4 ಗಂಟೆಗೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿತು. ಎಲ್ಲ ಮಠಗಳ ಯತಿಗಳು ತುಂಗಭದ್ರೆಯಲ್ಲಿ ಪವಿತ್ರ ಸ್ನಾನ ಮಾಡಿ ನವವೃಂದಾವನಕ್ಕೆ ಬಂದರು. ಸೋಸಲೆಮಠದ ವಿದ್ಯಾಶ್ರೀಶ ಶ್ರೀಗಳ ನೇತೃತ್ವದಲ್ಲಿ ವೃಂದಾವನಕ್ಕೆ ಪವಿತ್ರ ಮೃತ್ತಿಕೆ (ಮಣ್ಣನ್ನು) ಹಾಕಿ, ತುಳಸಿ ಗಿಡ ನೆಡಲಾಯಿತು. ಸುತ್ತಲೂ ಜಲಪ್ರೋಕ್ಷಣೆ ಮಾಡಿ, ಕ್ಷೀರ, ಫಲ, ಪುಷ್ಪಗಳಿಂದ ಅಭಿಷೇಕ ಮಾಡಿ ವೃಂದಾವನ ಶುದ್ಧೀಕರಣಗೊಳಿಸಲಾಯಿತು. ಮಹಾಮಂಗಳಾರತಿ, ನೈವೇದ್ಯ, ಮೂಲರಾಮದೇವರ ವಿಗ್ರಹ ಪೂಜೆ ನೆರೆವೇರಿಸಲಾಯಿತು.

ತನಿಖೆ: ವೃಂದಾವನ ಧ್ವಂಸಗೊಳಿಸಿದ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ರೇಣುಕಾ ಕೆ.ಸುಕುಮಾರ್‌ ತಿಳಿಸಿದ್ದಾರೆ.

ಪುನರ್‌ ನಿರ್ಮಿಸಿದ ವ್ಯಾಸರಾಜ ತೀರ್ಥರ ವೃಂದಾವನದಲ್ಲಿ ಮೃತ್ತಿಕೆ ಹಾಕಿ, ತುಳಸಿ ಸಸಿ ನೆಡಲಾಯಿತು.

ಸರ್ಕಾರದ ಸುಪರ್ದಿಗೆ?
ಕೊಪ್ಪಳ: ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯನ್ನು ತನ್ನ ಸುಪರ್ದಿಗೆ ಪಡೆಯಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

‘ಎರಡು ಮಠಗಳ ಮಧ್ಯೆಜಮೀನು ಮಾಲೀಕತ್ವದ ವಿವಾದ ನ್ಯಾಯಾಲಯದಲ್ಲಿದೆ. ಗಲಾಟೆಗಳು ಆಗುತ್ತಿವೆ. ಈ ಕಾರಣಕ್ಕೆ ಪ್ರತಿವರ್ಷ ಆರಾಧನೆ ವೇಳೆ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

‘ಇದು ನದಿ ಮಧ್ಯದ ಸ್ಥಳ. ಆದರೆ ವೃಂದಾವನ ಜಾಗ ಖಾಸಗಿಯದ್ದು. ರಕ್ಷಣೆ ಪಡೆಯಲು ಅವರು ಒಪ್ಪುತ್ತಿಲ್ಲ. ಹಿಂದೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು ಸಿ.ಸಿ.ಟಿ.ವಿ. ಕ್ಯಾಮೆರಾ, ನವವೃಂದಾವನ ಸುತ್ತಲೂ ತಂತಿ ಬೇಲಿ ಹಾಕಲು ಮಾಲೀಕರು ಅವಕಾಶ ನೀಡಿರಲಿಲ್ಲ. ಹೀಗಾಗಿ ಜಮೀನಿಗೆ ರಕ್ಷಣೆ ಇರಲಿಲ್ಲ’ ಎನ್ನುವುದು ಡಿ.ಸಿ ಪಿ.ಸುನೀಲ್‌ ಕುಮಾರ್‌ ಅವರ ವಿವರಣೆ.

*
ವ್ಯಾಸರಾಜರ ವೃಂದಾವನವನ್ನು ಒಡೆದು ಹಾಕಿದ್ದು ಧಾರ್ಮಿಕ ಪರಂಪರೆ ಮೇಲೆ ನಡೆಸಿದ ದಾಳಿ, ಸರ್ಕಾರ ಮತ್ತು ಮಠಾಧಿಪತಿಗಳು ಈ ಸ್ಮಾರಕ ರಕ್ಷಿಸಬೇಕು.
-ವಿಶ್ವೇಶ ತೀರ್ಥ ಸ್ವಾಮೀಜಿ,ಪೇಜಾವರ ಮಠ, ಉಡುಪಿ

*
ಮಾಹಿತಿ ತಿಳಿದು ಆತಂಕ ಆಗಿತ್ತು. ಭಕ್ತರ ಸಹಕಾರ ಮತ್ತು ಭಕ್ತಿಯಿಂದ ಪುನರ್ ಪ್ರತಿಷ್ಠಾಪನೆ ಆಗಿರುವುದು ಅತ್ಯಂತ ಸಂತೋಷ ತಂದಿದೆ.
-ಸುಬುಧೇಂದ್ರ ತೀರ್ಥ ಸ್ವಾಮೀಜಿ, ರಾಘವೇಂದ್ರ ಮಠ, ಮಂತ್ರಾಲಯ

*
ನವವೃಂದಾವನ ಗಡ್ಡೆ ಎಲ್ಲ ಮಠಗಳಿಗೂ ಪವಿತ್ರವಾದದು. ಈ ಕ್ಷೇತ್ರವನ್ನು ರಕ್ಷಣೆ ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ.
-ಸತ್ಯಾತ್ಮತೀರ್ಥರು, ಉತ್ತರಾದಿಮಠ, ಮಳಖೇಡ

ಇವನ್ನೂ ಓದಿ...

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜತೀರ್ಥರ ವೃಂದಾವನ ಪುನರ್ ಪ್ರತಿಷ್ಠಾಪನೆಗೆ ಬಂದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರನ್ನು ಉತ್ತರಾದಿ ಮಠದ ಸತ್ಯಾತ್ಮತೀರ್ಥರು, ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು ಕೈಹಿಡಿದು ಪೂಜೆಗೆ ಕರೆದುಕೊಂಡು ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.