ADVERTISEMENT

ಮನೆ ಮನೆಗೂ ಬೇಕು ವಾಟರ್‌ ಬಜೆಟ್‌ : ಡಾ.ಎನ್.ದೇವರಾಜರೆಡ್ಡಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 3:10 IST
Last Updated 26 ಜನವರಿ 2020, 3:10 IST
ಡಾ.ಎನ್.ದೇವರಾಜರೆಡ್ಡಿ
ಡಾ.ಎನ್.ದೇವರಾಜರೆಡ್ಡಿ   

ಚಿತ್ರದುರ್ಗದ ಡಾ.ಎನ್.ದೇವರಾಜರೆಡ್ಡಿ, ಭೂಗರ್ಭಶಾಸ್ತ್ರಜ್ಞರು. ಮೂರು ದಶಕಗಳಿಂದ ಜಲಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತರ್ಜಲ ಮಟ್ಟದ ಇಳಿಕೆಗೆ ಕಾರಣ ಮತ್ತು ಪರಿಹಾರಗಳ ಕುರಿತು ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

*ಅಂತರ್ಜಲ ಕೊರತೆಗೆ ಪ್ರಮುಖ ಕಾರಣಗಳೇನು ?

ಅವೈಜ್ಞಾನಿಕ ಕೃಷಿ ಪದ್ಧತಿಗಳು, ನಗರದಲ್ಲಾಗುತ್ತಿರುವ ನೀರಿನ ಪೋಲು, ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವುದು, ಅಭಿವೃದ್ಧಿ ಹೆಸರಲ್ಲಿ ಜಲಸಂರಕ್ಷಣಾ ರಚನೆಗಳನ್ನೇ ಆಪೋಷಣೆ ತೆಗೆದುಕೊಳ್ಳುತ್ತಿರುವುದೇ ಸಮಸ್ಯೆಗೆ ಕಾರಣಗಳು.

ADVERTISEMENT

ಕೊಳವೆಬಾವಿ ತಂತ್ರಜ್ಞಾನ ಬಂದ ನಂತರ ಈ ಐದು ವರ್ಷಗಳಲ್ಲಿ ಭೂಮಿಯ ಆಳದಲ್ಲಿರುವ ಲವಣಾಂಶವನ್ನು ಎತ್ತಿ ಮಣ್ಣಿಗೆ ಸೇರಿಸಲಾಗಿದೆ. ಹೀಗಾಗಿ ಮಣ್ಣಿನಲ್ಲಿ ಸತ್ವ ಕಡಿಮೆಯಾಗಿ, ಇಟ್ಟಿಗೆಯಂತಾಗಿದೆ. ಭೂಮಿಗೆ ನೀರುಇಂಗದಿರುವುದಕ್ಕೆ ಇದೂ ಕಾರಣ. ಇದರಿಂದಾಗಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ.

*ಅವೈಜ್ಞಾನಿಕ ಕೃಷಿ ಪದ್ಧತಿಗಳು ಹೇಗೆ ಕಾರಣವಾಗುತ್ತವೆ ?

ದಶಕಗಳ ಹಿಂದೆ ಕೆರೆ ತುಂಬಿದರೆ ಭತ್ತ ಬೆಳೆಯುತ್ತಿದ್ದರು. ಜಲಾಶಯದಲ್ಲಿ ನೀರಿದ್ದರೆ ಒಂದು ಬೆಳೆ ತೆಗೆಯುತ್ತಿ
ದ್ದರು. ಈಗ ಅಣೆಕಟ್ಟೆಗಳಲ್ಲಿ ನೀರಿದ್ದರೆ ಸಾಕು ಗದ್ದೆಯಲ್ಲಿನೀರು ನಿಲ್ಲಿಸಿ ಎರಡು ಬೆಳೆ ತೆಗೆಯುತ್ತಾರೆ. ಕೊಳೆವೆಬಾವಿ ನೀರಲ್ಲೇ ಅಡಿಕೆ ತೋಟ, ಭತ್ತದ ಗದ್ದೆ ಮಾಡುತ್ತಾರೆ. ಇಂಥವರ ಸಂಖ್ಯೆಯೇ ಹೆಚ್ಚು. ಮತ್ತೊಂದು ಕಡೆ, ಯಾವ ಬೆಳೆಗೆಎಷ್ಟು ನೀರು ಬಳಸಬೇಕೆಂಬ ಅರಿವಿಲ್ಲ. ಇಂಥ ಅವೈಜ್ಞಾನಿಕ ಕ್ರಮಗಳೇ ಅತಿಯಾದ ಅಂತರ್ಜಲ ಬಳಕೆಗೆ ಕಾರಣವಾಗಿದೆ.

*ನಗರಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲು ಕಾರಣ ಏನು?

ನಗರಗಳಲ್ಲಿ ಸೂರಿನ ಮೇಲೆ ಸುರಿಯುವ ಮಳೆ ನೀರಿನ ಬಗ್ಗೆ ಕಾಳಜಿ ಇಲ್ಲ. ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆಗೆ ಕಾನೂನು ಮಾಡಲಾಗಿದೆ. ಆದರೆ, ಅದರಿಂದ ತಪ್ಪಿಸಿಕೊಳ್ಳಲು ನಾಮಕವಾಸ್ತೆಗೆ ಮನೆಗಳಿಗೆ ಮಳೆನೀರು ಸಂಗ್ರಹ ವಿಧಾನ ಅಳವಡಿಸಿದಂತೆ ತೋರಿಸುವವರೆ ಹೆಚ್ಚಿದ್ದಾರೆ. ಸರಾಸರಿ ಮಳೆಗೆ, 1,200 ಚ.ಅಡಿಯ ಮನೆ ಮೇಲೆ ವಾರ್ಷಿಕವಾಗಿ ಸುರಿಯುವ 1.20 ಲಕ್ಷ ಲೀಟರ್‌ ಮಳೆ ನೀರುನ್ನು ಹರಿಯಲು ಬಿಟ್ಟು, ಅಷ್ಟೇ ನೀರನ್ನು ನೆಲದಾಳದಿಂದ ಎತ್ತುತ್ತಿದ್ದಾರೆ. ನಗರದ ಕಾಂಕ್ರೀಟ್‌ ನೆಲ ಮಳೆ ನೀರನ್ನು ಇಂಗಿಸುತ್ತಿಲ್ಲ.

ಇನ್ನೊಂದು ಕಡೆ ನಗರಗಳಿಗೆ ಕುಡಿಯುವುದಕ್ಕೆ, ಮನೆ, ಅಪಾರ್ಟ್‌ಮೆಂಟ್ ನಿರ್ಮಾಣ ಹಾಗೂ ಅಭಿವೃದ್ದಿ ಕಾರ್ಯಗಳಿಗೂ ಅಂತರ್ಜಲವನ್ನೇ ಆಶ್ರಯಿಸಲಾಗಿದೆ. ಹೀಗಾಗಿ ಶೇ 80ರಷ್ಟು ಅಂತರ್ಜಲ ಬರಿದಾಗಿದೆ. ಎಲ್ಲಿ ವಿದ್ಯುತ್ ಸಂಪರ್ಕವಿಲ್ಲವೋ ಅಂಥ ಪ್ರದೇಶದಲ್ಲಿ ಮಾತ್ರ ಅಂತರ್ಜಲ ಉಳಿದಿರಬಹುದು, ಅಷ್ಟೇ.

*ಇವುಗಳಿಗೆಲ್ಲ ಪರಿಹಾರ ಏನು ?

ಅಂತರ್ಜಲ ಆಪತ್ಕಾಲಕ್ಕಷ್ಟೇ ಬಳಕೆಯಾಗಬೇಕು. ಮಳೆ ನೀರು ಸಂಗ್ರಹಿಸಿ ಬಳಸಬೇಕು. ಪ್ರತಿ ಮನೆಯವರೂ
ವಾಟರ್‌ ಬಜೆಟ್‌ ಮಾಡಿಕೊಳ್ಳಬೇಕು. ಕುಡಿಯುವುದಕ್ಕೆ ಮಳೆ ನೀರು, ಮನೆ ಬಳಕೆಗೆ ಕಾರ್ಪೊರೇಷನ್ ನೀರು ಹಾಗೂ ಶೌಚಾಲಯ, ಕೈತೋಟಕ್ಕೆ ಮನೆಯಲ್ಲೇ ಉತ್ಪತ್ತಿಯಾಗುವ
ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಸುವಂತಾಗಬೇಕು. ಕೈಗಾರಿಕೆಗಳು ತ್ಯಾಜ್ಯ ನೀರನ್ನೇ ಸಂಸ್ಕರಿಸಿ ಬಳಸಬೇಕು.

ಮನೆಗಷ್ಟೇ ಅಲ್ಲ, ಎಲ್ಲ ಊರಿನಲ್ಲೂ ಪ್ರತಿ ವರ್ಷವರ್ಷಕ್ಕೆಷ್ಟು ನೀರು ಬೇಕು ಎಂಬ (ಬಳಕೆ ಮತ್ತು ಕೃಷಿಗಾಗಿ) ಅಂದಾಜುಪಟ್ಟಿ ಸಿದ್ಧ ಮಾಡಿ, ವಾಟರ್‌ ಬಜೆಟ್‌ ರೂಪಿಸಬೇಕು. ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಂಡು, ಕಾಪಿಟ್ಟು ಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.