ADVERTISEMENT

ಜನವರಿಯಲ್ಲಿ ಬಿಲ್ಲವ, ಈಡಿಗ ಸಮುದಾಯದ ಮತ್ತೊಂದು ಸಮಾವೇಶ: ಶೀಘ್ರ ತೀರ್ಮಾನ–ಬಿಕೆಎಚ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 14:29 IST
Last Updated 12 ಡಿಸೆಂಬರ್ 2023, 14:29 IST
<div class="paragraphs"><p>ಬಿ.ಕೆ. ಹರಿಪ್ರಸಾದ್</p></div>

ಬಿ.ಕೆ. ಹರಿಪ್ರಸಾದ್

   

ಬೆಳಗಾವಿ: ‘ಬಿಲ್ಲವ, ಈಡಿಗ ಸಮುದಾಯದ ಮತ್ತೊಂದು ಸಮಾವೇಶವನ್ನು ಜನವರಿಯಲ್ಲಿ ಮಾಡಬೇಕು ಎಂದು ಸಮಾಜದವರು ಹೇಳುತ್ತಿದ್ದಾರೆ. ಆ ಬಗ್ಗೆ ಬೆಂಗಳೂರಿನಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ವಿಧಾನ ಪರಿಷತ್​ ಕಾಂಗ್ರೆಸ್‌ ಸದಸ್ಯ ಬಿ.ಕೆ.  ಹರಿಪ್ರಸಾದ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ಸಮಾವೇಶ ಮಾಡಿದ ನಂತರ ಬೆಂಗಳೂರಿನಲ್ಲಿ ಮತ್ತೊಂದು ಸಮಾವೇಶ ಆಗಿದೆ. ಸರದಿ ಲೆಕ್ಕದಲ್ಲಿ ಸಮಾವೇಶ ನಡೆಯುತ್ತಿದೆ. ಅದು ಒಳ್ಳೆಯದು. ನನ್ನ ಸಮಾವೇಶಕ್ಕೆ ಪರ್ಯಾಯ ಎಂದು ಹೇಳಲ್ಲ’ ಎಂದರು.

ADVERTISEMENT

ಬೆಂಗಳೂರಿನಲ್ಲಿ ನಡೆದ ಬಿಲ್ಲವ, ಈಡಿಗರ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಅವರು, ‘ತುಳಿತಕ್ಕೆ ಒಳಗಾದವರನ್ನು ಒಡೆಯುವ ಕೆಲಸ ಆಗಬಾರದು. ಸಮುದಾಯ ಒಡೆಯಲು ಈ ಸಮಾವೇಶ ನಡೆದಿದೆ ಎಂಬ ಧಾಟಿಯಲ್ಲಿ ನಾನು ಹೇಳುತ್ತಿಲ್ಲ’ ಎಂದರು.

‘ಕಾಂಗ್ರೆಸ್​ ನಾಯಕ ರಾಹುಲ್‌ ಗಾಂಧಿ ಹಿಂದುಳಿದ ವರ್ಗಗಳ ಜಾತಿ ಗಣತಿ ಆಗಬೇಕು ಎಂದಿದ್ದಾರೆ. ಯಾವುದೇ ಸಮುದಾಯ ಒಡೆಯುವ ಕೆಲಸ ಆಗಬಾರದು. ಸಮಾವೇಶದಲ್ಲಿ ಸಮಾಜದ ಎಲ್ಲ ಸ್ವಾಮೀಜಿಗಳು ಬಂದರೆ ಒಗ್ಗಟ್ಟು ಸಾಧ್ಯ. ಆದರೆ, ಎಲ್ಲ ಸ್ವಾಮೀಜಿಗಳು ಇರಲಿಲ್ಲ. ಇದು ತಪ್ಪು ಎಂಬ ಅಭಿಪ್ರಾಯವನ್ನು ಸ್ವಾಮೀಜಿಗಳು‌ ವ್ಯಕ್ತಪಡಿಸಿದ್ದರು. ಅವರ ಕೋರಿಕೆಯ ಮೇರೆಗೆ ನಾನು ಸಮಾವೇಶಕ್ಕೆ‌ ಹೋಗಿಲ್ಲ’ ಎಂದರು.

‘ಸಮಾವೇಶದ ಹಿಂದೆ ನಿಮ್ಮನ್ನು ಗುರಿ ಮಾಡುವ ಉದ್ದೇಶವಿದೆ’ ಎಂದು ಚರ್ಚೆ ಆಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ‘ನಮ್ಮ ಸಮುದಾಯದಲ್ಲಿ ಇನ್ನೊಬ್ಬ ನಾಯಕನಾಗುತ್ತಾನೆ ಎಂದರೆ ಬಹಳ ಸಂತೋಷ. ಸೈಡ್ ಲೈನ್ ಮಾಡುವುದು, ಟಾರ್ಗೆಟ್​ ಮಾಡುವುದನ್ನು ಬಹಳ ವರ್ಷದಿಂದ ನೋಡಿದ್ದೇನೆ’ ಎಂದರು.

‘ಸಮಾವೇಶದಲ್ಲಿ ಏನು ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಿಲ್ಲ. ನಾರಾಯಣ ಗುರು ಅಧ್ಯಯನ ಪೀಠ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರೋ ತಪ್ಪುದಾರಿಗೆ ಎಳೆದಿದ್ದಾರೆ. ನನ್ನ ಅನುದಾನದಲ್ಲಿ ₹ 50 ಲಕ್ಷ ಕೊಟ್ಟು ಪೀಠ ಆರಂಭವಾಗಿದೆ. ಅದೀಗ ಅರ್ಧದಲ್ಲಿದ್ದು ಪೂರ್ಣಗೊಳಿಸಲು ₹ 2 ಕೋಟಿ ಅನುದಾನಕ್ಕೆ ಎರಡು ವರ್ಷದಿಂದ ಓಡಾಡುತ್ತಿದ್ದೇನೆ. ಕೋಟಿ ಚನ್ನಯ್ಯ ಥೀಂ ಪಾರ್ಕ್‌ಗೆ ₹ 5 ಕೋಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಅದು ಎಲ್ಲಿ ಇದೆ ಎಂದು ನನಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.