ADVERTISEMENT

ಮುಷ್ಕರ ನಡೆಯುತ್ತಿರುವುದೇಕೆ, ಪರಿಣಾಮಗಳೇನು?

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 7:39 IST
Last Updated 7 ಜನವರಿ 2020, 7:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಬ್ಯಾಂಕ್‌ ನೌಕರರು ಮತ್ತು ಎಐಟಿಯುಸಿ, ಸಿಐಟಿಯು, ಐಎನ್‌ಟಿಯುಸಿ, ಎಲ್‌ಪಿಎಫ್‌ ಸೇರಿದಂತೆ 10 ಟ್ರೇಡ್‌ ಯೂನಿಯನ್‌ಗಳು ನಾಳೆ ‘ಭಾರತ್‌ ಬಂದ್‌‘ಗೆ ಕರೆ ನೀಡಿವೆ. ಅಷ್ಟಕ್ಕೂ ಈ ಮುಷ್ಕರಕ್ಕೆ ಕಾರಣವೇನು? ಜನಜೀವನದ ಮೇಲೆ ಮುಷ್ಕರದ ಪರಿಣಾಮಗಳೇನು? ಏನೇನು ಲಭ್ಯ, ಏನು ಲಭ್ಯವಿಲ್ಲ? ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಯಾಕೆ ಬಂದ್‌?

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ಬಂದ್‌ಗೆ ಕರೆ ನೀಡಲಾಗಿದೆ ಎಂದು ಟ್ರೇಡ್‌ ಯೂನಿಯನ್‌ಗಳು ತಿಳಿಸಿವೆ. ಕಾರ್ಮಿಕ ವರ್ಗದ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರದ ಕಾರ್ಮಿಕ ಇಲಾಖೆಯು ಜ. 2ರಂದು ದೇಶದ ವಿವಿಧ ಟ್ರೇಡ್‌ ಯೂನಿಯನ್‌ಗಳ ಸಭೆ ನಡೆಸಿತ್ತು. ಆದರೆ, ಯಾವೊಂದು ಬೇಡಿಕೆ ಈಡೇರಿಸಲೂ ಕೇಂದ್ರ ಸಮ್ಮತಿಸಿಲ್ಲ. ಇದು ಕಾರ್ಮಿಕರಿಗೆ ಅಪಮಾನ ಎಂದಿರುವ ಟ್ರೇಡ್‌ ಯೂನಿಯನ್‌ಗಳು ಭಾರತ್‌ ಬಂದ್‌ಗೆ ಕರೆ ನೀಡಿವೆ. ಈ ಕುರಿತು 10 ಟ್ರೇಡ್‌ ಯೂನಿಯನ್‌ಗಳು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ.

ADVERTISEMENT

ಇದಲ್ಲದೇ ರೈಲ್ವೆ ಇಲಾಖೆ, ರಕ್ಷಣಾ ಇಲಾಖೆಯಲ್ಲಿನ ಖಾಸಗೀಕರಣವನ್ನು ಸಂಘಟನೆಗಳು ವಿರೋಧಿಸಿವೆ. ಬ್ಯಾಂಕ್‌ಗಳ ವಿಲೀನವನ್ನೂ ಖಂಡಿಸಿವೆ.

ಭಾರತ್‌ ಬಂದ್‌ ಪ್ರಯುಕ್ತ ನಡೆಯುತ್ತಿರುವ ಹೋರಾಟದಲ್ಲಿ ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು, ನೌಕರ ವರ್ಗದವರು ಭಾಗವಹಿಸುವ ಸಾಧ್ಯತೆಗಳಿವೆ.

ಬೇಡಿಕೆಗಳೇನು?

* ಗುತ್ತಿಗೆ ಪದ್ಧತಿ ನಿಯಂತ್ರಣ

* ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ

* ಡಾ.ಸ್ವಾಮಿನಾಥನ್ ವರದಿ ಜಾರಿ

* ಸ್ಕೀಂ ನೌಕರರನ್ನು ನೌಕರರೆಂದು ಪರಿಗಣನೆ

* ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು

* ಬ್ಯಾಂಕಿಂಗ್, ವಿಮೆ, ರಕ್ಷಣೆಯಲ್ಲಿ ನೇರ ಬಂಡವಾಳಕ್ಕೆ ವಿರೋಧ

* ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣಕ್ಕೆ ವಿರೋಧ

* ₹ 21 ಸಾವಿರ ಕನಿಷ್ಠ ವೇತನ ನಿಗದಿ ಮಾಡುವುದು

* ಆರ್ಥಿಕ ಹಿಂಜರಿತ ನೀತಿಗಳ ಕೈಬಿಡುವುದು

* ಅಸಂಘಟಿತ ಕಾರ್ಮಿಕರಿಗೆ ಪಿ.ಎಫ್, ಪಿಂಚಣಿ

* ಪಡಿತರ ಮೂಲಕ ಅಗತ್ಯ ವಸ್ತುಗಳ ವಿತರಣೆ

* ಉದ್ಯೋಗ ಖಾತ್ರಿ ಯೋಜನೆ ಬಲಪಡಿಸುವುದು

ಬಂದ್‌ಗೆ ಯಾರ್ಯಾರ ಬೆಂಬಲ?

ದೇಶದ ಪ್ರಮುಖ 10 ಟ್ರೇಡ್‌ ಯೂನಿಯನ್‌ಗಳು ಕರೆ ನೀಡಿರುವ ಈ ಬಂದ್‌ಗೆ 175 ರೈತ ಒಕ್ಕೂಟಗಳು, 60 ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಗಳು ಬೆಂಬಲ ನೀಡಿವೆ. ಶಿಕ್ಷಣ ವಾಣಿಜ್ಯೀಕರಣದ ವಿರುದ್ಧ ಇದೇ ಹೋರಾಟದಲ್ಲಿ ವಿದ್ಯಾರ್ಥಿಗಳು ಧನಿ ಎತ್ತಲು ತೀರ್ಮಾನಿಸಿದ್ದಾರೆ.

ಬ್ಯಾಂಕಿಂಗ್‌ ಸೇವೆಗಳಲ್ಲಿ ವ್ಯತ್ಯಯ

ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಮತ್ತು ಕೇಂದ್ರದ ಹಣಕಾಸು ನೀತಿಯನ್ನು ಬ್ಯಾಂಕ್‌ ನೌಕರರ ಸಂಘಗಳು ವಿರೋಧಿಸಿವೆ. ಇದಲ್ಲದೇ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬ್ಯಾಂಕ್‌ ನೌಕರರು ನಾಳಿನ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಆದರೆ, ಗ್ರಾಹಕರಿಗೆ ಆಗುವ ಅನಾನುಕೂಲ ತಪ್ಪಿಸಲು ಬ್ಯಾಂಕ್‌ಗಳು ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿವೆ.

ಬ್ಯಾಂಕ್‌ಗಳ ಎಟಿಎಂ ಸೇವೆಗಳಲ್ಲಿಯೂ ಸಮಸ್ಯೆ ಎದುರಾಗಬಹುದು. ಆದರೆ, ನೆಟ್‌ ಬ್ಯಾಂಕಿಂಗ್‌ ಸೇಯವಲ್ಲಿ ಯಾವುದೇ ತೊಡಕುಂಟಾಗದು ಎಂದು ಬ್ಯಾಂಕ್‌ಗಳು ತಿಳಿಸಿವೆ.

‘ಬಂದ್‌ನಿಂದಾಗಿ ತನ್ನ ಬ್ಯಾಂಕಿಂಗ್‌ ಸೇಯವಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆಗಳಿವೆ,’ ಎಂದು ಈಗಾಗಲೇ ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಶಾಲೆ ಕಾಲೇಜುಗಳು ಇರಲಿವೆಯೇ?

ರಾಜ್ಯದಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸದೇ ಇರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ದೇಶದ ವಿವಿಧೆಡೆಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸರ್ಕಾರಗಳು ಸೂಚನೆ ನೀಡಿವೆ.

ಈ ಸೇವೆಗಳಲ್ಲಿ ಅಡಚಣೆಯಿಲ್ಲ

ಬಂದ್‌ ಹಿನ್ನೆಲೆಯಲ್ಲಿ ಜನಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಿರುವ ರಾಜ್ಯ ಸರ್ಕಾರ ಎಸ್ಮಾ ಜಾರಿಯ ಚಿಂತನೆಯಲ್ಲಿದೆ. ಈ ಮೂಲಕ ಯಾವುದೇ ಅವ್ಯವಸ್ಥೆಗೆ ಎಡೆ ಮಾಡಿಕೊಡದಿರಲು ತೀರ್ಮಾನಿಸಿದೆ. ಹೀಗಾಗಿ ಬಿಎಂಟಿಸಿ, ನಮ್ಮ ಮೆಟ್ರೋ, ಕೆಎಸ್‌ಆರ್‌ಟಿಸಿ ಸೇವೆಯಲ್ಲಿ ಯಾವುದೇ ವ್ಯತ್ಯಯವಿರಲಾರದು.

ಇದರ ಜೊತೆಗೆ, ಹಾಲು, ಔಷದ, ಆಂಬ್ಯುಲೆನ್ಸ್‌ ಮತ್ತು ವೈದ್ಯಕೀಯಸೇವೆಯಲ್ಲಿ ಯಾವುದೇ ಸಮಸ್ಯೆ ಆಗದು.

ಟ್ಯಾಕ್ಸಿ, ಆಟೋಗಳು ಲಭ್ಯವೇ?

ರಾಜ್ಯದಲ್ಲಿ ಆ್ಯಪ್‌ ಆಧಾರಿತ ಓಲಾ, ಉಬರ್‌ನಂಥ ಕ್ಯಾಬ್‌ಗಳುಗಳನ್ನು ಹೊರತುಪಡಿಸಿ, ಕೆಲವಾಣಿಜ್ಯ ಉದ್ದೇಶದ ಟ್ಯಾಕ್ಸಿ ಸಂಘಗಳು, ಆಟೋ ರಿಕ್ಷಾ ಸಂಘಗಳು ಬಂದ್‌ಗೆ ಬೆಂಬಲ ನೀಡಿವೆ. ಹೀಗಾಗಿ ಆಟೋ, ಟ್ಯಾಕ್ಸಿ ಸೇವೆಯಲ್ಲಿ ಸ್ವಲ್ಪವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.