ADVERTISEMENT

ಭೂಕುಸಿತ: ಪಶ್ಚಿಮಘಟ್ಟ ಧಾರಣಾ ಸಾಮರ್ಥ್ಯದ ಅಧ್ಯಯನಕ್ಕೆ ಈಶ್ವರ ಖಂಡ್ರೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 5:41 IST
Last Updated 1 ಜೂನ್ 2025, 5:41 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು ಭಾಗದಲ್ಲಿ ಮುಂಗಾರು ಪೂರ್ವ ಮಳೆಗೆ ಭೂಕುಸಿತ ಸಂಭವಿಸುತ್ತಿರುವ ಕಾರಣ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಹಲವು ರಸ್ತೆ, ಮತ್ತಿತರ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಇದರಿಂದ ಘಟ್ಟ ಅಪಾಯಕ್ಕೆ ಸಿಲುಕಿದೆ, ಆಸ್ತಿಹಾನಿ, ಬೆಳೆ ಹಾನಿ, ಜೀವಿಹಾನಿಯ ಜೊತೆಗೆ ವನ್ಯ ಜೀವಿಗಳೂ ಸಂಕಷ್ಟ ಎದುರಿಸುವಂತಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪಶ್ಚಿಮಘಟ್ಟ ಕ್ಷೀಣಿಸಿದರೆ ಮುಂಬರುವ ದಿನಗಳಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಭೀತಿ ಇದೆ ಎಂಬ ತಜ್ಞರ ಅಭಿಪ್ರಾಯ ಉಲ್ಲೇಖಿಸಿರುವ ಖಂಡ್ರೆ, ಈ ನಿಟ್ಟಿನಲ್ಲಿ ಅಧ್ಯಯನ ಮಾಡಿ ಮೂರು ತಿಂಗಳ ಒಳಗೆ ಪಶ್ಚಿಮಘಟ್ಟದ ತಾಳಿಕೊಳ್ಳುವ ಸಾಮರ್ಥ್ಯದ ಬಗ್ಗೆ ವರದಿ ಸಲ್ಲಿಸುವಂತೆ ಜೀವವೈವಿಧ್ಯಮಂಡಳಿಯ ಸದಸ್ಯ ಕಾರ್ಯದರ್ಶಿ, ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ ಮತ್ತು ತರಬೇತಿ ಹಾಗೂ ಅರಣ್ಯ ಸಂರಕ್ಷಣೆ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೂ ಸೂಚಿಸಿದ್ದಾರೆ.

ಜೀವವೈವಿಧ್ಯತೆಯ ತಾಣವಾದ ಪಶ್ಚಿಮಘಟ್ಟದಲ್ಲಿ ಕರ್ನಾಟಕದ ಅರಣ್ಯಗಳ ಪೈಕಿ ಶೇಕಡಾ 60ರಷ್ಟು ಅರಣ್ಯ ಪ್ರದೇಶ ಇದ್ದು, ಇದು ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲಗಳ ನೆಲೆಬೀಡಾಗಿದೆ. ಪಶ್ಚಿಮಘಟ್ಟಗಳು ಮಳೆಯ ಮಾರುತ ತಡೆದು ಮಳೆ ಸುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.