ಡಿ.ಕೆ.ಶಿವಕುಮಾರ್
ಬೆಂಗಳೂರು: 'ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ನಾನು ಹೋಗುತ್ತೇನೋ ಇಲ್ಲವೋ ಎಂಬುದು ನನ್ನ ವೈಯಕ್ತಿಕ ನಂಬಿಕೆಗೆ ಬಿಟ್ಟ ವಿಚಾರವಾಗಿದೆ' ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದ್ದರು.
'ಗಂಗೆಯಲ್ಲಿ ಮಿಂದ ತಕ್ಷಣ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಾಪಗಳೆಲ್ಲ ಕಳೆದುಹೋಗುತ್ತಾ? ಕುಂಭ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆ ಆಗುತ್ತಾ? ಹೀಗಂತ ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಪ್ರಶ್ನೆ ಮಾಡಲ್ವಾ?' ಎಂದು ಅಶೋಕ ವ್ಯಂಗ್ಯ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, 'ನನ್ನ ವೈಯಕ್ತಿಕ ನಂಬಿಕೆ ಹಾಗೂ ಭಕ್ತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅವರು (ಅಶೋಕ) ನನ್ನ ವಿರುದ್ಧ ಹೇಳಿಕೆ ಕೊಟ್ಟರೆ ಪಕ್ಷದಿಂದ ಗೌರವ ಸಿಗಲಿದೆ ಎಂದು ಭಾವಿಸುತ್ತಾರೆ. ಯಾರೂ ಏನು ಬೇಕಾದರೂ ಹೇಳಲಿ. ಇವೆಲ್ಲವೂ ನಮ್ಮ ಧರ್ಮ, ಕರ್ಮ, ಆಚರಣೆ, ನಂಬಿಕೆ, ಸಂಪ್ರದಾಯಕ್ಕೆ ಸಂಬಂಧಪಟ್ಟದ್ದಾಗಿದೆ' ಎಂದು ಹೇಳಿದ್ದಾರೆ.
'ನೀರಿಗೆ ಯಾವುದೇ ಬಣ್ಣ ಅಥವಾ ಆಕಾರ ಇರುವುದಿಲ್ಲ. ಪ್ರತಿಯೊಬ್ಬರಿಗೂ ನೀರು ಬೇಕು. ಅಶೋಕ ಅವರ ಸಮಸ್ಯೆ ಏನೆಂಬುದು ನನಗೆ ತಿಳಿಯುತ್ತಿಲ್ಲ. ಬಹುಶಃ ಅವರಿಗೆ ಏನಾದರೂ ಸಮಸ್ಯೆ ಇರಬಹುದು. ನನ್ನ ವೈಯಕ್ತಿಕ ನಂಬಿಕೆಗಳ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ನನ್ನ ನಂಬಿಕೆ, ಭಕ್ತಿ ನನ್ನ ವೈಯಕ್ತಿಕ ವಿಚಾರವಾಗಿದೆ' ಎಂದು ಹೇಳಿದ್ದಾರೆ.
ಕುಂಭಮೇಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ನಾನ ಮಾಡಿದ ಕುರಿತು ಟೀಕೆ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ, 'ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆಯಾಗಲಿದೆಯೇ' ಎಂದು ಪ್ರಶ್ನಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಹೇಳಿರುವುದೇ ಬೇರೆ ಅರ್ಥದಲ್ಲಿ. ಅಶೋಕ ಅವರು ಪ್ರಧಾನಿ ಮೋದಿ ಅವರು ಕುಂಭ ಮೇಳದಲ್ಲಿ ಭಾಗವಹಿಸುತ್ತಿರುವುದನ್ನು ಮೊದಲು ಪ್ರಶ್ನಿಸಲಿ. ಅವರ ಪಕ್ಷದ ನಾಯಕರು, ವಿದೇಶದ ನಾಯಕರು ಭಾಗವಹಿಸುತ್ತಿರುವುದನ್ನು ಟೀಕಿಸಿದ ಬಳಿಕ, ನಾನು ಪ್ರತಿಕ್ರಿಯಿಸುತ್ತೇನೆ’ ಎಂದರು.
ಕುಂಕುಮ, ರುದ್ರಾಕ್ಷಿ ಧಾರಣೆ ನನ್ನ ಇಚ್ಛೆ: ಡಿ.ಕೆ. ಶಿವಕುಮಾರ್
‘ಪೂಜೆ ಮಾಡುವುದು, ಕುಂಕುಮ ಇಡುವುದು, ರುದ್ರಾಕ್ಷಿ ಧರಿಸುವುದು ನನ್ನ ಇಚ್ಛೆ. ಕೆಲವರು ಸೂಟು ಬೂಟು ಹಾಕಿದರೆ, ಮತ್ತೆ ಕೆಲವರು ಪಂಚೆ ಉಡುತ್ತಾರೆ. ಅವರವರ ಉಡುಗೆ ಅವರ ಇಚ್ಛೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ಅವರು ಏನಾದರೂ ಹೇಳಿಕೊಳ್ಳಲಿ. ನಮ್ಮ ಧರ್ಮ, ನಮ್ಮ ಕರ್ಮ, ಆಚಾರ ವಿಚಾರಗಳನ್ನು ಅನವಶ್ಯಕವಾಗಿ ಎಳೆದಾಡಲು ನಾನು ಹೋಗುವುದಿಲ್ಲ. ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದೆ’ ಎಂದರು.
‘ಕುಂಭಮೇಳಕ್ಕೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ, ‘ನಾನು ಹೋಗುತ್ತೇನೊ, ಬಿಡುತ್ತೇನೊ ನನಗೆ ಬಿಟ್ಟ ವಿಚಾರ. ಯಾವುದೇ ಧರ್ಮದ ಆಚರಣೆ, ನಂಬಿಕೆಗಳು ಆಯಾಯ ವ್ಯಕ್ತಿಗೆ ಸಂಬಂಧಿಸಿದ ವಿಚಾರಗಳು. ನಾವು ಪ್ರತಿಯೊಂದಕ್ಕೂ ಗೌರವ ನೀಡಬೇಕು. ಆದರೆ, ಅವುಗಳನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.