ADVERTISEMENT

ಕೋಲಾರ, ಮಂಡ್ಯ, ತುಮಕೂರಲ್ಲಿ ಬಿಜೆಪಿ ಬೆಂಬಲಿಸಿದವರ ಮೇಲಿಲ್ಲದ ಕ್ರಮ ನನ್ನ ಮೇಲೇಕೆ?

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 10:31 IST
Last Updated 19 ಜೂನ್ 2019, 10:31 IST
   

ಬೆಂಗಳೂರು: ಕೋಲಾರದಲ್ಲಿ ನಮ್ಮವರೇ ಮುನಿಯಪ್ಪರನ್ನು ಸೋಲಿಸಿದರು, ಮಂಡ್ಯದಲ್ಲಿ ನಮ್ಮವರೇ ಬಹಿರಂಗವಾಗಿ ಸುಮಲತಾ ಬೆಂಬಲಿಸಿದರು, ಕೆಪಿಸಿಸಿ ಅಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ ಸಿಕ್ಕಿತು. ಇವರ ಮೇಲಿಲ್ಲದ ಕ್ರಮ ನನ್ನ ಮೇಲೇಕೆ ಎಂದು ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಸಕ ರೋಷನ್‌ ಬೇಗ್‌ ಅವರು ಪ್ರಶ್ನೆ ಮಾಡಿದ್ದಾರೆ.

ಬುಧವಾರ ಬೆಂಗಳೂರಿನ ಪ್ರೇಜರ್‌ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಮಂಗಳವಾರ ರಾತ್ರಿ ನನ್ನನ್ನು ಅಮಾನತು ಮಾಡಿದ ಸುದ್ದಿ ತಿಳಿಯಿತು. ಸತ್ಯ ಹೇಳುವುದು ಅಪರಾಧವೇ? ರಾಜ್ಯ ನಾಯಕರ ಬಗ್ಗೆ ನಾನು ಮಾಡಿರುವ ಟೀಕೆಯಲ್ಲಿ ಸತ್ಯಾಂಶವಿದೆ. ಕಾಂಗ್ರೆಸ್‌ನಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯವನ್ನಷ್ಟೇ ನಾನು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಮಲಿಂಗಾರೆಡ್ಡಿ, ಎಚ್. ಕೆ. ಪಾಟೀಲ್, ಕೆ ಎಚ್ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯರನ್ನ ಭೇಟಿ ಮಾಡಿ ಮಾತನಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸೀಟು ಬಂದಿದೆ. ಮುನಿಯಪ್ಪ ಅವರನ್ನು ಕಾಂಗ್ರೆಸ್ಸಿನವರೇ ಸೋಲಿಸಿದರು. ಅವರ ಮೇಲೆ ಯಾಕೆ ಕ್ರಮವಿಲ್ಲ?‌ಮಂಡ್ಯದಲ್ಲಿ ಬಹಿರಂಗವಾಗಿಯೇ ನಮ್ಮವರು ಸುಮಲತಾಗೆ ಬೆಂಬಲ ವ್ಯಕ್ತಪಡಿಸಿದರು. ಅವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ?ನಾನು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಕೊಡಿಸಿದೆ.ಕೆಪಿಸಿಸಿ ಅಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿಗೆ ಮುನ್ನಡೆ ಬಂದಿದೆ,’ ಎಂದ ಅವರು ಈಗಲೂ ತಾವೊಬ್ಬ ನಿಷ್ಟಾವಂತ ಕಾಂಗ್ರೆಸ್‌ ಕಾರ್ಯಕರ್ತ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಚರ್ಚೆಗಳಾಗಬೇಕು. ತುಮಕೂರಿನಲ್ಲಿ ಮುದ್ದೇಹನುಮೇಗೌಡರನ್ನ ಬಲಿ ಕೊಡಲಾಯಿತು.ಮುದ್ದಹನುಮೇಗೌಡರು ಉತ್ತಮ ಸಂಸದೀಯ ಪಟು.ಕಾಂಗ್ರೆಸ್‌ಗೆ ಈ ಗತಿ ಬಂತಲ್ಲ ಎಂಬ ನೋವಿನಿಂದ ನಾನು ಮಾತನಾಡಿದ್ದೇನೆ ಎಂದು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡರು.

ನನ್ನ ಮೇಲೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಿದ್ದರಾಮಯ್ಯ ಅವರೂ ನಾಯಕರ ಮೇಲೆ ಒತ್ತಡ ಹಾಕಿರಬಹುದು ಎಂದು ರೋಷನ್‌ ಬೇಗ್‌ ಅವರು ಅನುಮಾನ ವ್ಯಕ್ತಪಡಿಸಿದರು.

ಮುಂದೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ.ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಎಚ್. ಕೆ. ಪಾಟೀಲ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಸಿದ್ದರಾಮಯ್ಯ ಅವರ ಮಾರ್ಮಿಕ ಮಾತಿನ ಕುರಿತು ಪ್ರತಿಕ್ರಿಯಿಸಿದ ಅವರು, ‘ರಾಜಣ್ಣ, ಜಾರಕಿಹೊಳಿ ಉಪ್ಪು ತಿಂದಿಲ್ಲವೇ? ಕೆ. ಎಚ್. ಮುನಿಯಪ್ಪರನ್ನ ಸೋಲಿಸಿದವರು ಉಪ್ಪು ತಿಂದಿಲ್ಲವೇ? ತುಂಬಾ ಜನ ಉಪ್ಪು ತಿಂದಿದ್ದಾರೆ. ಎಲ್ಲರೂ ನೀರು ಕುಡಿಯಬೇಕಲ್ಲವೇ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.