
ಬೆಂಗಳೂರು: ಮೃಗಾಲಯ ಹಾಗೂ ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ನೀಗಿಸಲು ನಿರ್ಧರಿಸಲಾಗಿದ್ದು, ಪ್ರತ್ಯೇಕ ವೃಂದ ಸೃಷ್ಟಿಸಿ 15 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟ ಕಾರಣದಿಂದ ಮೃಗಾಲಯಗಳ ಮುಖ್ಯಸ್ಥರೊಂದಿಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ‘15 ವನ್ಯಜೀವಿ ವೈದ್ಯರ ನೇಮಕಕ್ಕೆ ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಈಗಿರುವ ಪಶುವೈದ್ಯರ ನೆರವು ಪಡೆಯಬೇಕು’ ಎಂದು ಸೂಚಿಸಿದರು.
ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ- ಬ್ಯಾಕ್ಟೀರಿಯಾ ಸೋಂಕು ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಸೋಂಕು ಗಾಳಿಯಿಂದ, ನೀರಿನಿಂದ, ಆಹಾರ ಅಥವಾ ಪ್ರಾಣಿ ಪಾಲಕರಿಂದ ಪಸರಿಸಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಬೇಕು. ಬೇರೆ ಪ್ರಾಣಿಗಳಿಗೆ ಪಸರಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಮೃಗಾಲಯಗಳಲ್ಲಿ ವನ್ಯಜೀವಿಗಳ ನಿರ್ವಹಣೆ ಮತ್ತು ಸೋಂಕು ಕಾಣಿಸಿಕೊಂಡಾಗ ಹೇಗೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸಿ, ಕಡ್ಡಾಯವಾಗಿ ಅನುಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ವನ್ಯಜೀವಿಗಳು ಮೃತಪಟ್ಟರೆ ಆಡಿಟ್: ಮೃಗಾಲಯಗಳು, ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳು ಮೃತಪಟ್ಟರೆ ತಕ್ಷಣ ‘ಆಡಿಟ್’ ಮಾಡಿಸಬೇಕು. ಸರ್ಕಾರಕ್ಕೆ ಮಾಹಿತಿ ನೀಡಬೇಕು. ಈಗಿರುವ ಏಳು ಕೃಷ್ಣಮೃಗಗಳಿಗೂ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬನ್ನೇರುಘಟ್ಟದಿಂದ ನೆರೆಯ ರಾಜ್ಯಕ್ಕೆ ಸಾಗಿಸುವಾಗ ಅರಿವಳಿಕೆ ನೀಡಿದ್ದ ಕಾಡೆಮ್ಮೆ ಮೃತಪಟ್ಟಿದೆ. ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.