ADVERTISEMENT

ಅರಣ್ಯ ದುರ್ಬಳಕೆ: ಪವನ ವಿದ್ಯುತ್‌ ಕಂಪನಿಗಳಿಗೆ ದಂಡ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 0:30 IST
Last Updated 17 ನವೆಂಬರ್ 2025, 0:30 IST
ಚಿತ್ರದುರ್ಗ ಸಮೀಪ ‍ಪವನ ಯಂತ್ರಗಳು
ಚಿತ್ರದುರ್ಗ ಸಮೀಪ ‍ಪವನ ಯಂತ್ರಗಳು   

ಬೆಂಗಳೂರು: ಚಿತ್ರದುರ್ಗದ ಜೋಗಿಮಟ್ಟಿ ಹಾಗೂ ಮಾರಿಕಣಿವೆ ಮೀಸಲು ಅರಣ್ಯ ಪ್ರದೇಶದಲ್ಲಿ ಪವನ ವಿದ್ಯುತ್‌ ಘಟಕ ಸ್ಥಾಪನೆಗೆ ನಿಯಮ ಉಲ್ಲಂಘಿಸಿ ಹೆಚ್ಚುವರಿ ಭೂಮಿ ಬಳಸಿರುವ ಪ್ರಕರಣದಲ್ಲಿ ಖಾಸಗಿ ವಿದ್ಯುತ್‌ ಕಂಪನಿಗಳಿಂದ ಕರ್ನಾಟಕ ಅರಣ್ಯ ಇಲಾಖೆ ದಂಡ ವಸೂಲಿ ಪ್ರಕ್ರಿಯೆ ಆರಂಭಿಸಿದೆ.

ದಂಡ ವಸೂಲಿ ಮಾಡುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ವಸೂಲಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಬೆಟ್ಟ–ಗುಡ್ಡಗಳ ಸಾಲು ಇರುವ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಲಾಗಿದ್ದು, ದಶಕಗಳಿಂದ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ADVERTISEMENT

ಗುಡ್ಡದ ಪ್ರದೇಶಗಳಲ್ಲಿ ಕೆಲ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅದಕ್ಕೆ ಇಲಾಖೆ ಅನುಮತಿ ಬೇಕು. ಅದರಲ್ಲೂ ಮೀಸಲು ಅರಣ್ಯವಾಗಿದ್ದರೆ ಕಡ್ಡಾಯವಾಗಿ ನಿಗದಿತ ಪ್ರದೇಶದಲ್ಲಿಯೇ ಪವನ ಯಂತ್ರಗಳನ್ನು ಅಳವಡಿಸಬೇಕು ಎನ್ನುವ ನಿಯಮಾವಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೆಲ ಯೋಜನೆ ಆರಂಭಗೊಂಡು ವಿಸ್ತರಣೆ ವೇಳೆ ಹೆಚ್ಚುವರಿ ಅರಣ್ಯ ಭೂಮಿ ಬಳಸಿ ವಿದ್ಯುತ್‌ ಉತ್ಪಾದಿಸುತ್ತಿರುವುದು ಪತ್ತೆಯಾಗಿತ್ತು.

ಎಲ್ಲೆಲ್ಲಿ ಉಲ್ಲಂಘನೆ:

ಚಿತ್ರದುರ್ಗ ಜಿಲ್ಲೆಯ ಎರಡು ಕಡೆ ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚುವರಿ ಅರಣ್ಯ ಪ್ರದೇಶವನ್ನು ಪವನ ವಿದ್ಯುತ್‌ ಘಟಕಗಳಿಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಪವನ ವಿದ್ಯುತ್‌ ಘಟಕ‌ಗಳ ಸ್ಥಳ ಪರಿಶೀಲನೆ ನಡೆಸಿದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚುವರಿ ಅರಣ್ಯ ಬಳಕೆಯಾಗಿರುವುದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ವೈಪರಿತ್ಯ ಸಚಿವಾಲಯದ ತಜ್ಞರ ತಂಡದ ಗಮನಕ್ಕೆ ಬಂದಿತ್ತು.

‘ಜೋಗಿಮಟ್ಟಿ ಹಾಗೂ ಮಾರಿಕಣಿವೆ ಭಾಗದಲ್ಲಿ 548.07 ಎಕರೆ ಅರಣ್ಯ ಪ್ರದೇಶವನ್ನು ಪವನ ವಿದ್ಯುತ್‌ ಘಟಕಕ್ಕೆ ಬಳಸಲು ಎನೆರ್‌ ಕಾನ್‌ ಸಂಸ್ಥೆಗೆ ಅನುಮತಿ ನೀಡಿತ್ತು. ಆನಂತರ ಈ ಯೋಜನೆ ವಿಂಡ್‌ ವರ್ಲ್ಡ್‌ ಲಿಮಿಟೆಡ್‌ ಸಂಸ್ಥೆ ಪಡೆದುಕೊಂಡಿತ್ತು. ಆರು ಕಂಪೆನಿಗಳ ಹತ್ತು ಯೋಜನೆಗಳಲ್ಲಿಯೂ ಈ ರೀತಿ 112 ಎಕರೆ ಅರಣ್ಯ ಭೂಮಿಯನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಂಡಿರುವುದು ಕಂಡು ಬಂದು ನಂತರ ನೋಟಿಸ್‌ ನೀಡಲಾಗಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಜ್ಞರ ಸಮಿತಿ ಸೂಚನೆ:

ಅರಣ್ಯ ಭೂಮಿ ಬಳಕೆ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ವಿಸ್ತೃತವಾಗಿ ಸಮಿತಿ ಚರ್ಚಿಸಿತ್ತು. ಈ ರೀತಿ ನಿಗದಿತ ಪ್ರದೇಶಕ್ಕಿಂತ ಹೆಚ್ಚಿನ ಅರಣ್ಯ ಭೂಮಿ ಪಡೆಯುವುದು ಸ್ಪಷ್ಟ ನಿಯಮ ಉಲ್ಲಂಘನೆ. ಆದರೆ, ಭೂಮಿ ಬಳಕೆ ಮಾಡಿಕೊಂಡಿರುವುದರಿಂದ ದಂಡ ವಿಧಿಸಬೇಕು ಎಂದು ಕರ್ನಾಟಕ ಅರಣ್ಯಪಡೆಗಳ ಮುಖ್ಯಸ್ಥರಿಗೆ ಸಚಿವಾಲಯವು ಪತ್ರ ಬರೆದು ಸೂಚಿಸಿತ್ತು.

ಕಳೆದ ವರ್ಷವೇ ಅರಣ್ಯ ಪಡೆಗಳ ಮುಖ್ಯಸ್ಥರು ದಂಡ ವಸೂಲಿಗೆ ಚಿತ್ರದುರ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಹೆಚ್ಚುವರಿ ಭೂಮಿ ಬಳಸಿ ನಿಯಮ ಉಲ್ಲಂಘಿಸಿದ್ದ ಸಂಸ್ಥೆಗಳು ದಂಡವನ್ನು ನಾಲ್ಕೈದು ವರ್ಷವಾದರೂ ಪಾವತಿಸಿರಲಿಲ್ಲ. ಯೋಜನೆ ರದ್ದುಪಡಿಸುವ ನೋಟಿಸ್‌ ಅನ್ನು ಜಾರಿಗೊಳಿಸಿತ್ತು. ಸಂಸ್ಥೆಗಳು ದಂಡ ಪಾವತಿಸದೇ ಇದ್ದರೆ ಹೆಚ್ಚುವರಿ ಶೇ 100ರಷ್ಟು ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮದ ಎಚ್ಚರಿಕೆ ನೀಡಿದ ನಂತರ ಈಗ ವಸೂಲಿ ಪ್ರಕ್ರಿಯೆ ಚುರುಕುಗೊಂಡಿದೆ.

‘ಅರಣ್ಯ ವಿಲೇವಾರಿ ವಿಭಾಗವು ದಂಡದ ಮೊತ್ತವನ್ನು ನಿಗದಿಪಡಿಸಿ ಪಾವತಿಸಲು ಸೂಚಿಸಿತ್ತು. ಅಲ್ಲದೇ ಹೆಚ್ಚುವರಿ ದಂಡದ ಎಚ್ಚರಿಕೆ ನೀಡಿದ ನಂತರ ಈಗ ₹10 ಕೋಟಿಯಷ್ಟು ದಂಡ ವಸೂಲಿಯಾಗಿದೆ. ಉಳಿದ ದಂಡದ ಬಾಕಿ ವಸೂಲಿಯನ್ನು ಒಂದೆರಡು ತಿಂಗಳಲ್ಲಿ ಮಾಡಲಾಗುವುದು’ ಎಂದು ಚಿತ್ರದುರ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯಕ್‌ ತಿಳಿಸಿದರು.

ದಂಡದ ಪ್ರಮಾಣ ಹೇಗೆ

ಅರಣ್ಯ ಭೂಮಿಯನ್ನು ಸರ್ಕಾರದ ಅನುಮತಿ ಪಡೆದು ವಾಣಿಜ್ಯ ಉದ್ದೇಶಗಳಿಗೆ ಬಳಸಿದ್ದರೆ ಭೂಮಿಯ ಒಟ್ಟು ಮೌಲ್ಯದ (ಎನ್‌ಪಿವಿ) ಮೇಲೆ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗುತ್ತದೆ. ಅರಣ್ಯದ ಮಹತ್ವ ಬಳಕೆ ಭೂಮಿ ಆಧರಿಸಿ ದಂಡ ನಿಗದಿಯಾಗಲಿದೆ. ಕೇಂದ್ರ ಪರಿಸರ ಅರಣ್ಯ ಹವಾಮಾನ ವೈಪರಿತ್ಯ ಸಚಿವಾಲಯದ ಸಮಿತಿ ಇದೇ ಮಾರ್ಗಸೂಚಿ ಅಡಿ ದಂಡ ವಿಧಿಸುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.