ADVERTISEMENT

ಕನ್ನಡ ಬಾವುಟಕ್ಕೆ ಬೆಂಕಿ: ಖಂಡನಾ ನಿರ್ಣಯಕ್ಕೆ ನಿರ್ಧಾರ

ಶಿವಸೇನೆ ಕೃತ್ಯದ ವಿರುದ್ಧ ಜೆಡಿಎಸ್ ಸದಸ್ಯರ ಧರಣಿ l ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿದ ಅನ್ನದಾನಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:26 IST
Last Updated 16 ಡಿಸೆಂಬರ್ 2021, 21:26 IST
   

ಬೆಳಗಾವಿ (ಸುವರ್ಣ ವಿಧಾನಸೌಧ): ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡದ ಬಾವುಟ ಸುಟ್ಟ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಗುರುವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ‘ಪ್ರಜಾವಾಣಿ’ಯನ್ನು ಪ್ರದರ್ಶಿಸಿ, ಬಾವುಟಕ್ಕೆ ಬೆಂಕಿ ಇಟ್ಟ ವಿಷಯದ ವರದಿಯನ್ನು ಪ್ರಸ್ತಾಪಿಸಿದ ಜೆಡಿಎಸ್‌ನ ಡಾ.ಕೆ.ಅನ್ನದಾನಿ, ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಅಶೋಕ, ‘ಕನ್ನಡ ಬಾವುಟ ಸುಟ್ಟಿದ್ದು ಕನ್ನಡಿಗರಿಗೆ ಅಪಾರ ನೋವು ತಂದಿದೆ. ನಾಡಿನ ನೆಲ, ಜಲ, ಭಾಷೆ ರಕ್ಷಿಸುವುದು ನಮ್ಮ ಜವಾಬ್ದಾರಿ. ಎಂಇಎಸ್‌ ಮತ್ತು ಶಿವಸೇನೆಯವರು ಪುಂಡಾಟಿಕೆ ನಡೆಸುತ್ತಿದ್ದಾರೆ. ಬಾವುಟ ಸುಟ್ಟವರು ಪುಂಡರು ಮತ್ತು ಕಿಡಿಗೇಡಿಗಳು. ಅಂತಹವರನ್ನು ಮಟ್ಟ ಹಾಕಬೇಕು. ಇದಕ್ಕಾಗಿ ಖಂಡನಾ ನಿರ್ಣಯ ಮಂಡಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಕೊಲ್ಲಾಪುರದಲ್ಲಿ ನಡೆದ ಘಟನೆ ಭಾಷಾ ದಳ್ಳುರಿಗೆ ಕಾರಣವಾಗುತ್ತದೆ. ಎರಡು ರಾಜ್ಯಗಳು ಉತ್ತಮ ಬಾಂಧವ್ಯ ಹೊಂದಿವೆ. ಪುಂಡಾಟಿಕೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಘಟನೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮಗೆ ಆಗುವುದಿಲ್ಲ’ ಎಂದೂ ಹೇಳಿದರು.

ವಿಷಯ ಪ್ರಸ್ತಾಪಿಸಿದ ಡಾ.ಕೆ.ಅನ್ನದಾನಿ, ‘ಕನ್ನಡದ ಬಾವುಟ ಸುಟ್ಟು ಹಾಕಿದ ಕಿಡಿಗೇಡಿಗಳ ವಿರುದ್ಧ ಇನ್ನೂ ಯಾವುದೇ ಕ್ರಮ ಆಗಿಲ್ಲ. ಈ ಘಟನೆ ಇಡೀ ಕರ್ನಾಟಕಕ್ಕೆ ಮಾಡಿರುವ ಅಪಮಾನ. ಕನ್ನಡಿಗರ ಅಸ್ಮಿತೆಯ ಪ್ರಶ್ನೆ’ ಎಂದು ಹೇಳಿದರು.

ಈ ವಿಷಯದ ಬಗ್ಗೆ ಜೆಡಿಎಸ್‌ನ ಇನ್ನೂ ಕೆಲವು ಸದಸ್ಯರು ಮಾತನಾಡಲು ಯತ್ನಿಸಿದಾಗ ‘ಶೂನ್ಯವೇಳೆ ಆಗಿರುವುದರಿಂದ ಅದಕ್ಕೆ ಅವಕಾಶ ಇಲ್ಲ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದು ಜೆಡಿಎಸ್‌ ಶಾಸಕರನ್ನು ಕೆರಳಿಸಿತು. ಆಗ ಅನ್ನದಾನಿ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಅನ್ನದಾನಿ ತಮ್ಮ ಕೈಯಲ್ಲಿ ಕನ್ನಡದ ಬಾವುಟವನ್ನು ಹಿಡಿದು ನಿಂತರು.

‘ಜೆಡಿಎಸ್‌ ಸದಸ್ಯರು ಆಸನಗಳಲ್ಲಿ ಕುಳಿತು ಮಾತನಾಡಬೇಕು’ ಎಂದು ಸಭಾಧ್ಯಕ್ಷರು ಮನವಿ ಮಾಡಿದಾಗ ಜೆಡಿಎಸ್‌ ಶಾಸಕರು ಧರಣಿ ಕೈಬಿಟ್ಟರು.

‘ಬೆಳಗಾವಿ ತಮಗೆ ಬೇಕು ಎಂಬ ಚಟವನ್ನು ಎಂಇಎಸ್‌ , ಶಿವಸೇನೆ ಕೈಬಿಡಬೇಕು. ಕನ್ನಡಿಗರ ಸ್ವಾಭಿಮಾನ ಕೆಣಕಬಾರದು. ವಿಧಾನಸಭೆ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಅನ್ನದಾನಿ ಒತ್ತಾಯಿಸಿದರು.

ಪುಂಡರಿಗೆ ಶಿಕ್ಷೆಯಾಗಲಿ: ಸಿದ್ದರಾಮಯ್ಯ
ಕನ್ನಡದ ಬಾವುಟ ಸುಟ್ಟಿರುವುದು ಭಾವನಾತ್ಮಕ ವಿಷಯ ಆದ್ದರಿಂದ ಖಂಡನಾ ನಿರ್ಣಯ ಮಂಡಿಸಬೇಕು ಮತ್ತು ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಒತ್ತಾಯಿಸಿದರು.

‘ಮಹಾರಾಷ್ಟ್ರದ ಪುಂಡರು, ಮತಿಹೀನರು ಕನ್ನಡದ ಬಾವುಟ ಸುಟ್ಟಿದ್ದಾರೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಎಲ್ಲಾ ರಾಜ್ಯಗಳ ವಾಸಿಗಳೂ ಭಾರತೀಯರು. ಇಂತಹ ನಡೆಯನ್ನು ಸಹಿಸಿಕೊಳ್ಳಬಾರದು ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.