ADVERTISEMENT

Gaza Deal | ಒಪ್ಪಂದಕ್ಕೆ ಬಾರದಿದ್ದರೆ ನರಕ ದರ್ಶನ: ಹಮಾಸ್‌ಗೆ ಟ್ರಂಪ್‌ ಎಚ್ಚರಿಕೆ

ಏಜೆನ್ಸೀಸ್
Published 4 ಅಕ್ಟೋಬರ್ 2025, 2:49 IST
Last Updated 4 ಅಕ್ಟೋಬರ್ 2025, 2:49 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ಗಾಜಾದ ಭವಿಷ್ಯಕ್ಕಾಗಿ ಪ್ರಸ್ತಾವಿತ ಒಪ್ಪಂದಕ್ಕೆ ಬರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್‌ಗೆ ಅಂತಿಮ ಗಡುವು ನೀಡಿದ್ದಾರೆ. ಅಲ್ಲದೇ ಇದು ಕೊನೆಯ ಅವಕಾಶ ಎಂದು ಅವರು ಎಚ್ಚರಿಸಿದ್ದಾರೆ.

ಭಾನುವಾರ ಸಂಜೆ 6 ಗಂಟೆಗೆ(ಸ್ಥಳೀಯ ಕಾಲಮಾನ) ಹಮಾಸ್ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಟ್ರಂಪ್ ಶುಕ್ರವಾರ ಸಾಮಾಜಿಕ ಮಾಧ್ಯಮ ಟ್ರುತ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಕೊನೆಯ ಅವಕಾಶ. ಒಪ್ಪಂದಕ್ಕೆ ಬಾರದಿದ್ದರೆ ಯಾರೂ ಹಿಂದೆಂದೂ ನೋಡಿರದ ರೀತಿಯಲ್ಲಿ ಹಮಾಸ್‌ಗೆ ನರಕ ದರ್ಶನವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯನ್ನು ಒಪ್ಪಿಕೊಳ್ಳಲು ಹಮಾಸ್‌ಗೆ ಮೂರರಿಂದ ನಾಲ್ಕು ದಿನಗಳ ಕಾಲಾವಕಾಶ ನೀಡುವುದಾಗಿ ಟ್ರಂಪ್ ಮಂಗಳವಾರ ಹೇಳಿದ್ದರು. ಹಮಾಸ್ ಈ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ ಎಂದು ಗುಂಪಿನ ಆಪ್ತ ಮೂಲಗಳು ಬುಧವಾರ ತಿಳಿಸಿವೆ.

ADVERTISEMENT

‘ಟ್ರಂಪ್‌ ಅವರ ಯೋಜನೆ ಬಗ್ಗೆ ಹಮಾಸ್‌ ಸಮಾಲೋಚನೆ ನಡೆಸುತ್ತಿದೆ. ಇದಕ್ಕಾಗಿ ಸ್ವಲ್ಪ ಕಾಲಾವಕಾಶ ಅಗತ್ಯವಿರುವ ಬಗ್ಗೆ ಸಂಧಾನಕಾರರಿಗೆ ಮಾಹಿತಿ ನೀಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ, ಹಮಾಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಯೋಜನೆಯು ಕಳವಳಕಾರಿ ಅಂಶಗಳನ್ನು ಒಳಗೊಂಡಿದೆ. ಇದರ ಬಗ್ಗೆ ನಮ್ಮ ನಿಲುವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ಹಮಾಸ್‌ನ ರಾಜಕೀಯ ಬ್ಯೂರೊ ಸದಸ್ಯ ಮೊಹಮ್ಮದ್‌ ಸಜ್ಜಲ್‌ ಹೇಳಿದ್ದಾರೆ.

ಗಾಜಾದಲ್ಲಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವುದು ಮತ್ತು ಹಮಾಸ್‌ ಹಿಡಿತದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು 72 ಗಂಟೆ ಒಳಗಾಗಿ ಬಿಡುಗಡೆ ಮಾಡುವುದನ್ನು ಈ ಶಾಂತಿ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.