ಬಿ-2 ರಹಸ್ಯ ಬಾಂಬರ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಇರಾನ್‌ನ ಮೂರು ಅಣ್ವಸ್ತ್ರ ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಮಧ್ಯಪ್ರವೇಶ ಮಾಡಿದೆ.
ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿ ನಾಶಪಡಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರಿಂದ ಮಧ್ರಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ.
ಅಮೆರಿಕದ ಅಧಿಕಾರಿಗಳ ಪ್ರಕಾರ ಇರಾನ್ ಅಣ್ವಸ್ತ್ರ ನೆಲೆಗಳ ಮೇಲೆ ದಾಳಿ ನಡೆಸಲು ಅತ್ಯಂತ ಶಕ್ತಿಶಾಲಿ ಬಿ-2 ರಹಸ್ಯ ಬಾಂಬರ್ ಯುದ್ಧ ವಿಮಾನಗಳನ್ನು ಬಳಕೆ ಮಾಡಲಾಗಿದೆ.
ಇರಾನ್‌ನ ಫೋರ್ಡೊ, ನತಾನ್ಜ್ ಮತ್ತು ಇಸ್ಪಹಾನ್ ಅಣು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಫೋರ್ಡೊ ಮೇಲೆ ಆರು ಬಿ-2 ಬಾಂಬರ್ ಯುದ್ಧ ವಿಮಾನಗಳು 12 ಬಂಕರ್ ನಿಷ್ಕ್ರಿಯಗೊಳಿಸುವ ಬಾಂಬ್‌ಗಳನ್ನು ಬೀಳಿಸಿವೆ ಎಂದು ಹೇಳಿದ್ದಾರೆ.
ಅದೇ ರೀತಿ ನತಾನ್ಜ್ ಮತ್ತು ಇಸ್ಪಹಾನ್ ಗುರಿಯಾಗಿಸಿ ನೌಕಾಪಡೆಯ ಜಲಾಂತರ್ಗಾಮಿ ನೌಕೆಗಳು 30 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿವೆ. ನತಾನ್ಜ್ ಮತ್ತು ಇಸ್ಪಹಾನ್ ಮೇಲೆ ಬಿ-2 ಎರಡು ಬಂಕರ್ ನಿಷ್ಕ್ರಿಯ ಬಾಂಬ್‌ಗಳನ್ನು ಬೀಳಿಸಿತು ಎಂದು ತಿಳಿಸಿದ್ದಾರೆ.
ಬಿ-2 ಜಗತ್ತಿನ ಅತ್ಯಂತ ದುಬಾರಿ ಯುದ್ಧ ವಿಮಾನವಾಗಿದೆ. ಈ ರಹಸ್ಯ ಬಾಂಬರ್‌ಗಳನ್ನು ನಾರ್ತ್‌ರಾಪ್ (Northrop) ನಿರ್ಮಿಸಿದೆ. ಬರೋಬ್ಬರಿ 13,500 ಕಿಲೋಗ್ರಾಂ ಬಂಕರ್ ನಾಶಪಡಿಸುವ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕ ಮಿಲಿಟರಿ ಬಳಿಯಿರುವ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಬಿ-2 ರಹಸ್ಯ ಬಾಂಬರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.