
ಶೇಖ್ ಹಸೀನಾ
ಢಾಕಾ: ರಾಜಧಾನಿ ಹೊರವಲಯದಲ್ಲಿ ವಸತಿ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ವಿಶೇಷ ನ್ಯಾಯಾಲಯವು ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪೂರ್ವಾಚಲ್ ನ್ಯೂಟೌನ್‌ನಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದ ಹಸೀನಾ, ಮಗನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಆಯೋಗವು (ಎಸಿಸಿ) ಸಲ್ಲಿಸಿದ ಎರಡು ದೋಷಾರೋಪ ಪಟ್ಟಿಗಳನ್ನು ಆಧರಿಸಿ ಢಾಕಾದ ಮೆಟ್ರೊಪಾಲಿಟಿನ್ ಹಿರಿಯ ನ್ಯಾಯಾಧೀಶ ರೋಬಿಯುಲ್ ಅಲಂ ಆದೇಶ ಹೊರಡಿಸಿದ್ದಾರೆ.
ಇದೇ ಪ್ರಕರಣಗಳಲ್ಲಿ ಶೇಖ್ ಹಸೀನಾ ಅವರ ಸಹೋದರಿ ಶೇಖ್ ರೆಹಾನಾ ಸೇರಿದಂತೆ ಅವರ ಸಂಬಂಧಿಯೂ ಆದ ಬ್ರಿಟನ್‌ನ ಸಂಸದೆ ತುಲಿಪ್ ರಿಜ್ವಾನಾ ಸಿದ್ದಿಕ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಏತನ್ಮಧ್ಯೆ, ಹಸೀನಾ ಅವರ ಸೋದರ ಸೊಸೆ ಅಜ್ಮಿನಾ ಸಿದ್ದಿಕ್ ಅವರಿಗೆ ಒಂದು ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಪ್ರಮುಖ ಆರೋಪಿಗಳಾಗಿದ್ದಾರೆ.
ಪ್ರಕರಣ ಸಂಬಂಧ 2025ರ ಮಾರ್ಚ್ 10ರಂದು 18 ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಆಯೋಗವು ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಶೇಖ್ ಹಸೀನಾ ಹಾಗೂ ಕುಟುಂಬದ ಸದಸ್ಯರ ವಿರುದ್ಧ ನ್ಯಾಯಾಲಯವು ಹಲವು ಬಾರಿ ಬಂಧನ ವಾರಂಟ್‌ಗಳನ್ನು ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.