ADVERTISEMENT

100 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ನೀಡುವ ಗುರಿ: ಜೋ ಬೈಡನ್‌

ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯ

ಪಿಟಿಐ
Published 22 ಜನವರಿ 2021, 9:02 IST
Last Updated 22 ಜನವರಿ 2021, 9:02 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಕೋವಿಡ್‌–19 ನಿಯಂತ್ರಿಸಲು ನೂತನ ಅಧ್ಯಕ್ಷ ಜೋ ಬೈಡನ್‌ ಅವರು ಹಲವು ಕಾರ್ಯಾದೇಶಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಕೊರೊನಾ ವೈರಸ್‌ ‍ಪರೀಕ್ಷೆ ಮತ್ತು ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಕಡ್ಡಾಯಗೊಳಿಸುವ ಕ್ರಮ ಕೂಡ ಒಂದಾಗಿದೆ. ಜತೆಗೆ, 100 ದಿನಗಳಲ್ಲಿ 10 ಕೋಟಿ ಡೋಸ್‌ ಲಸಿಕೆ ನೀಡಲು ಉದ್ದೇಶಿಸಲಾಗಿದೆ.

ಕಾರ್ಯಾದೇಶಗಳಿಗೆ ಸಹಿ ಹಾಕಿದ ಬಳಿಕ ಮಾತನಾಡಿದ ಜೋ ಬೈಡನ್‌ ಅವರು,‘ಅಮೆರಿಕಕ್ಕೆ ಪ್ರಯಣಿಸುವ ಮೊದಲು ಪ್ರಯಾಣಿಕರು ಕೊರೊನಾ ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ ದೇಶದೊಳಗೆ ಆಗಮಿಸಿದ ಬಳಿಕ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಅಲ್ಲದೇ ಎಲ್ಲರೂ ಮಾಸ್ಕ್‌ ಧರಿಸಬೇಕು’ ಎಂದು ಬೈಡನ್‌ ಅವರು ತಿಳಿಸಿದರು.

‘ದೇಶದಲ್ಲಿ ಸೃಷ್ಟಿಯಾಗಿರುವ ಯುದ್ಧದ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸುರಕ್ಷತಾ ಸಾಧನಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಸೋಂಕಿನಿಂದ 4 ಲಕ್ಷ ಅಮೆರಿಕನ್ನರು ಮೃತಪಟ್ಟಿದ್ದಾರೆ. ಎರಡನೇ ವಿಶ್ವ ಯುದ್ಧದಲ್ಲೂ ಈ ‍ಪ್ರಮಾಣದಲ್ಲಿ ಸಾವು ಸಂಭವಿಸಿರಲಿಲ್ಲ’ ಎಂದು ಬೈಡನ್‌ ಅವರು ಹೇಳಿದರು.

ADVERTISEMENT

‘ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ತಿಂಗಳು ಸಾವಿನ ಸಂಖ್ಯೆಯು 5 ಲಕ್ಷ ತಲುಪುವ ಸಾಧ್ಯತೆಯಿದೆ. ಹೀಗಾಗಿ, ನಾವು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಹಲವು ತಿಂಗಳುಗಳು ಬೇಕಾಗಬಹುದು. ಏನೇ ಆಗಲಿ, ನಾವು ಈ ಪಿಡುಗನ್ನು ಸೋಲಿಸುತ್ತೇವೆ. ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅವರು ಭರವಸೆ ನೀಡಿದರು.

‘ರಾಷ್ಟ್ರೀಯ ಕಾರ್ಯತಂತ್ರವನ್ನು ವಿಜ್ಞಾನ ಮತ್ತು ಸತ್ಯಗಳ ಆಧಾರದ ಮೇಲೆ ಸಮಗ್ರ ಮತ್ತು ವಿಸ್ತೃತ ರೂಪದಲ್ಲಿ ರಚಿಸಲಾಗುವುದೇ ಹೊರತು ರಾಜಕೀಯದ ಮೂಲಕವಲ್ಲ. ಹಾಗಾಗಿ ಸುರಕ್ಷಿತ, ‍ಪರಿಣಾಮಕಾರಿ ಕೋವಿಡ್‌ ಲಸಿಕೆ ಅಭಿಯಾನವನ್ನು ಆರಂಭಿಸೋಣ. ಈ ಅಭಿಯಾನವು 100 ದಿನಗಳಲ್ಲಿ 10 ಕೋಟಿ ಡೋಸ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.