ADVERTISEMENT

ಯೋಧರ ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡದ ಚೀನಾ: ಗುಪ್ತಚರ ವರದಿ

ಅಮೆರಿಕದ ಗುಪ್ತಚರ ವರದಿಯಿಂದ ಬಹಿರಂಗ

ಏಜೆನ್ಸೀಸ್
Published 14 ಜುಲೈ 2020, 6:29 IST
Last Updated 14 ಜುಲೈ 2020, 6:29 IST
ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದ ಗಲ್ವಾನ್ ಕಣಿವೆ
ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದ ಗಲ್ವಾನ್ ಕಣಿವೆ   

ವಾಷಿಂಗ್ಟನ್: ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಯೋಧರ ಅಂತ್ಯಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಬಹಿರಂಗ ಸಮಾರಂಭಗಳನ್ನು ನಡೆಸದಂತೆ ಅವರ ಕುಟುಂಬದವರ ಮೇಲೆ ಚೀನಾ ಸರ್ಕಾರ ಒತ್ತಡ ಹೇರಿತ್ತು. ಸಂಘರ್ಷದಲ್ಲಿ ತಮ್ಮ ಕಡೆಯಲ್ಲಾಗಿರುವ ಸಾವು–ನೋವುಗಳನ್ನು ಬಹಿರಂಗಪಡಿಸಲು ಚೀನಾ ಸಿದ್ಧವಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಅಮೆರಿಕದ ಗುಪ್ತಚರ ವರದಿ ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜೂನ್ 15ರಂದು ರಾತ್ರಿ ನಡೆದಿದ್ದ ಸಂಘರ್ಷದಲ್ಲಿ ಭಾರತ, ಚೀನಾ ಎರಡೂ ಕಡೆಯಲ್ಲಿ ಸಾವು–ನೋವು ಸಂಭವಿಸಿತ್ತು. ಭಾರತ ಯಾವುದೇ ಹಿಂಜರಿಕೆಯಿಲ್ಲದೆ 20 ಯೋಧರು ಹುತಾತ್ಮರಾಗಿರುವುದಾಗಿ ಮಾಹಿತಿ ಬಹಿರಂಗಪಡಿಸಿದೆ ಮತ್ತು ಅವರನ್ನು ವೀರರು ಎಂದು ಪರಿಗಣಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಜೂನ್ 28ರಂದು ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹುತಾತ್ಮ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸಿದ್ದರಲ್ಲದೆ, ಅಂತಹ ಯೋಧರ ಕುಟುಂಬದವರು ಸ್ತುತ್ಯರ್ಹರು ಎಂದಿದ್ದರು.

ADVERTISEMENT

ಆದಾಗ್ಯೂ, ಘಟನೆ ನಡೆದು ಒಂದು ತಿಂಗಳು ಕಳೆದರೂ ಎಷ್ಟು ಮಂದಿ ಯೋಧರು ಮೃತಪಟ್ಟಿದ್ದಾರೆ ಎಂಬುದನ್ನು ಚೀನಾ ಬಹಿರಂಗಪಡಿಸಿಲ್ಲ. ಘರ್ಷಣೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳ ಮೇಲೆ ಚೀನಾ ಸರ್ಕಾರ ದೌರ್ಜನ್ಯ ಎಸಗಿದೆ. ಸಾವಿನ ಸಂಖ್ಯೆ ಬಹಿರಂಗಪಡಿಸಲು ನಿರಾಕರಿಸುವುದು ಮಾತ್ರವಲ್ಲದೆ, ಮೃತ ಯೋಧರ ಕುಟುಂಬದವರಿಗೆ ಅಂತ್ಯಸಂಸ್ಕಾರಕ್ಕೂ ಅವಕಾಶ ನೀಡಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

ತಪ್ಪನ್ನು ಮುಚ್ಚಿಹಾಕುವ ಸಲುವಾಗಿ ತಮ್ಮ ಕಡೆಯಲ್ಲಾಗಿರುವ ಸಾವನ್ನು ಚೀನಾ ಮುಚ್ಚಿಡುತ್ತಿದೆ. ಘರ್ಷಣೆಯಲ್ಲಿ ಚೀನಾದ 35 ಯೋಧರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಭಾವಿಸಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಘರ್ಷಣೆಯಲ್ಲಿ ಮೃತಪಟ್ಟಿರುವ ಯೋಧರ ಅಂತ್ಯಸಂಸ್ಕಾರವನ್ನು ಕುಟುಂಬದವರು ಸಾಂಪ್ರದಾಯಿಕವಾಗಿ ನಡೆಸುವಂತಿಲ್ಲ. ಬಹಿರಂಗ ಸಮಾರಂಭಗಳನ್ನು ಹಮ್ಮಿಕೊಳ್ಳುವಂತಿಲ್ಲ. ಅಂತ್ಯಕ್ರಿಯೆಯಲ್ಲಿ ದೂರದಿಂದ ಭಾಗವಹಿಸಬಹುದಷ್ಟೇ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ಕುಟುಂಬದವರಿಗೆ ಹೇಳಿತ್ತು ಎಂದೂ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.