ADVERTISEMENT

ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ: ತಾಲಿಬಾನ್‌ ಬಣ್ಣನೆ

ಪಿಟಿಐ
Published 3 ಸೆಪ್ಟೆಂಬರ್ 2021, 11:12 IST
Last Updated 3 ಸೆಪ್ಟೆಂಬರ್ 2021, 11:12 IST
ಕಾಬೂಲ್‌ನಲ್ಲಿ ಅಫ್ಗಾನ್‌ ಮಹಿಳೆಯರ ಪ್ರತಿಭಟನೆ
ಕಾಬೂಲ್‌ನಲ್ಲಿ ಅಫ್ಗಾನ್‌ ಮಹಿಳೆಯರ ಪ್ರತಿಭಟನೆ   

ಪೇಶಾವರ: ಚೀನಾ ನಮ್ಮ 'ಅತ್ಯಂತ ಪ್ರಮುಖ ಪಾಲುದಾರ' ರಾಷ್ಟ್ರವೆಂದು ಅಫ್ಗಾನ್‌ನ ತಾಲಿಬಾನ್‌ ಬಣ್ಣಿಸಿದೆ. ಹಸಿವು ಮತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿರುವ ಯುದ್ಧ ಪೀಡಿತ ಆಫ್ಗಾನಿಸ್ತಾನದ ಪುನರ್ ನಿರ್ಮಾಣ ಹಾಗೂ ತಾಮ್ರದ ನಿಕ್ಷೇಪದ ಗಣಿಗಾರಿಕೆಗಾಗಿ ತಾಲಿಬಾನ್‌ ಬೀಜಿಂಗ್‌ನ ಸಹಕಾರಕ್ಕಾಗಿ ಎದುರು ನೋಡುತ್ತಿದೆ.

ಚೀನಾದೊಂದಿಗೆ ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನ ಬಹುಭಾಗಗಳನ್ನು ಬೆಸೆಯುವ ಆರ್ಥಿಕ ವಲಯ ಮತ್ತು ರಸ್ತೆ ನಿರ್ಮಾಣ ಮಾಡಲು ಚೀನಾ ಹಮ್ಮಿಕೊಂಡಿರುವ 'ಒನ್‌ ಬೆಲ್ಟ್‌; ಒನ್‌ ರೋಡ್‌ (ಒಬಿಒಆರ್‌)' ಯೋಜನೆಯನ್ನು ಬೆಂಬಲಿಸುತ್ತಿರುವುದಾಗಿ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್‌ ಹೇಳಿದ್ದಾರೆ.

'ಚೀನಾ ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಹೂಡಿಕೆ ಮಾಡಲು ಹಾಗೂ ನಮ್ಮ ದೇಶದ ಪುನರ್‌ ನಿರ್ಮಾಣಕ್ಕೆ ಸಿದ್ಧವಿದೆ' ಎಂದು ಮುಜಾಹಿದ್‌ ಇಟಲಿಯ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿರುವುದಾಗಿ ಜಿಯೊ ನ್ಯೂಸ್‌ ವರದಿ ಮಾಡಿದೆ.

ADVERTISEMENT

'ದೇಶದಲ್ಲಿ ಅಧಿಕ ಪ್ರಮಾಣದಲ್ಲಿರುವ ತಾಮ್ರದ ಗಣಿಗಳಿವೆ, ಚೀನಾದ ಸಹಕಾರದಿಂದ ಅವುಗಳಲ್ಲಿ ಕಾರ್ಯಾಚರಣೆ ಪುನರಾರಂಭಿಸಬಹುದಾಗಿದೆ ಹಾಗೂ ಆಧುನೀಕರಿಸಬಹುದಾಗಿದೆ. ಅಷ್ಟೇ ಅಲ್ಲದೆ, ಜಾಗತಿಕವಾಗಿ ಮಾರುಕಟ್ಟೆಗಳ ಪ್ರವೇಶಕ್ಕೆ ಚೀನಾ ನಮ್ಮ ಮಾರ್ಗವಾಗಲಿದೆ' ಎಂದು ಮುಜಾಹಿದ್‌ ಅಭಿಪ್ರಾಯ ಪಟ್ಟಿದ್ದಾರೆ.

ರಷ್ಯಾ ಸಹ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಮಾಸ್ಕೊದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದಾಗಿ ಮುಜಾಹಿದ್‌ ಹೇಳಿದ್ದಾರೆ.

'ಅಫ್ಗಾನಿಸ್ತಾನದ ಪರಿಸ್ಥಿತಿ ಮೂಲಭೂತವಾಗಿ ಬದಲಾಗುತ್ತಿದೆ. ಎಲ್ಲಾ ದೇಶಗಳೂ ತಾಲಿಬಾನ್‌ ಅನ್ನು ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವ ಅಗತ್ಯವಿದೆ' ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅಮೆರಿಕಕ್ಕೆ ಇತ್ತೀಚೆಗೆ ಸಲಹೆ ನೀಡಿದ್ದರು.

ಆಫ್ಗಾನಿಸ್ತಾನಕ್ಕೆ ತುರ್ತಾಗಿ ಆರ್ಥಿಕ, ಮಾನವೀಯ ನೆರವು ನೀಡಲು ಅಮೆರಿಕ ಇತರ ರಾಷ್ಟ್ರಗಳ ಜೊತೆ ಕೆಲಸ ಮಾಡಬೇಕು. ಸಹಜವಾಗಿ ಆಡಳಿತ ನಡೆಸಲು, ಸಾಮಾಜಿಕ ಭದ್ರತೆ ಮತ್ತು ಸ್ಥಿರತೆ ನೀಡಲು, ಹಣದುಬ್ಬರ ತಗ್ಗಿಸುವ ದಿಸೆಯಲ್ಲಿ ಅಫ್ಗಾನಿಸ್ತಾನದ ಹೊಸ ರಾಜಕೀಯ ರಚನೆಗೆ ನೆರವು ನೀಡಬೇಕು ಎಂದು ವಾಂಗ್‌ ಹೇಳಿದ್ದರು.

ಆಗಸ್ಟ್‌ 15ರಂದು ತಾಲಿಬಾನ್‌ ಆಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ ಅನ್ನು ವಶಕ್ಕೆ ಪಡೆಯಿತು. 20 ವರ್ಷಗಳ ನಿರಂತರ ಕಾರ್ಯಾಚರಣೆಯನ್ನು ನಿಲ್ಲಿಸಿದ ಅಮೆರಿಕ ಪಡೆಗಳು ಆಗಸ್ಟ್‌ 31ರಂದು ಅಫ್ಗನ್‌ನಿಂದ ತೆರಳಿದವು.

ಅಫ್ಗಾನಿಸ್ತಾನದ ಜನತೆಗೆ ಮಾನವೀಯ ನೆಲೆಯಲ್ಲಿ ನೆರವಾಗಲು ಜಾಗತಿಕ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಹ ಕರೆ ನೀಡಿದ್ದರು.

ಅಫ್ಗನ್‌ನಲ್ಲಿ ಎದುರಾಗಲಿರುವ ಮಾನವೀಯ ದುರಂತದ ಅಂಕಿಅಂಶಗಳನ್ನು ಗುಟೆರೆಸ್ ಬಹಿರಂಗಪಡಿಸಿದ್ದರು. '1.8 ಕೋಟಿ ಅಫ್ಗನ್ನರಿಗೆ ಬದುಕಲು ನೆರವು ಬೇಕಿದೆ. ಮೂವರಲ್ಲಿ ಒಬ್ಬರಿಗೆ ಮುಂದಿನ ಆಹಾರ ಎಲ್ಲಿಂದ ಸಿಗುತ್ತದೆ ಎಂದು ತಿಳಿದಿಲ್ಲ. ಮುಂದಿನ ವರ್ಷದೊಳಗೆ ಒಟ್ಟಾರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಧದಷ್ಟು ಮಕ್ಕಳು ಅಪೌಷ್ಠಿಕತೆ ಎದುರಿಸುವ ಭೀತಿಯಿದೆ. ಅಲ್ಲದೆ ಪ್ರತಿ ದಿನ ಜನರು ಮೂಲಭೂತ ಸೇವೆಗಳ ಲಭ್ಯತೆಯ ಕೊರತೆಯನ್ನು ಎದುರಿಸುತ್ತಿದ್ದಾರೆ' ಎಂದು ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.