ADVERTISEMENT

ಸುಂಕ ಸಮರ: ಅಮೆರಿಕದ ಬೋಯಿಂಗ್‌ ವಿಮಾನ ಸ್ವೀಕರಿಸದಂತೆ ಚೀನಾ ಆದೇಶ

ಚೀನಾ– ಅಮೆರಿಕ ನಡುವೆ ಸುಂಕ ಸಮರ

ರಾಯಿಟರ್ಸ್
Published 15 ಏಪ್ರಿಲ್ 2025, 15:58 IST
Last Updated 15 ಏಪ್ರಿಲ್ 2025, 15:58 IST
ಬೋಯಿಂಗ್‌ ವಿಮಾನ–ಎಎಫ್‌ಪಿ ಚಿತ್ರ
ಬೋಯಿಂಗ್‌ ವಿಮಾನ–ಎಎಫ್‌ಪಿ ಚಿತ್ರ   

ಬೀಜಿಂಗ್‌: ಚೀನಾದ ಸರಕುಗಳಿಗೆ ಅಮೆರಿಕವು ಶೇ 145 ಸುಂಕ ವಿಧಿಸಿದ  ವಿಚಾರ ಮತ್ತೊಂದು ಸುತ್ತಿನ ವ್ಯಾಪಾರ ಸಮರಕ್ಕೆ ವೇದಿಕೆಯಾಗಿದೆ. 

‘ಅಮೆರಿಕದ ಮೇಲೆ ಒತ್ತಡ ಹೇರುವ ಭಾಗವಾಗಿ, ಬೋಯಿಂಗ್‌ ಸಂಸ್ಥೆ ವಿತರಿಸುವ ‌ವಿಮಾನಗಳನ್ನು ಸ್ವೀಕರಿಸದಂತೆ ಚೀನಾವು ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ’ ಎಂದು ‘ಬ್ಲೂಮ್‌ಬರ್ಗ್‌ ನ್ಯೂಸ್‌’ ವರದಿ ಮಾಡಿದೆ. 

ಬೋಯಿಂಗ್‌ ಸಂಸ್ಥೆಗೆ ಚೀನಾ ದೇಶ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಚೀನಾದ ಈ ನಿರ್ಧಾರದಿಂದ ಬೋಯಿಂಗ್‌ನ ಪ್ರತಿಸ್ಪರ್ಧಿ ಕಂಪನಿ ‘ಏರ್‌ಬಸ್‌’ನ ಷೇರುಗಳು ಮೌಲ್ಯ ಮಂಗಳವಾರ ಶೇಕಡ 2ರಷ್ಟು ಏರಿಕೆ ದಾಖಲಿಸಿತು.

ADVERTISEMENT

ಜಾಗತಿಕ ವಿಮಾನಯಾನ ಸಂಸ್ಥೆಗಳು ಈಗಾಗಲೇ ದರ ಸಮರದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಏರ್‌ಲೈನ್ಸ್‌ ಹಾಗೂ ಪೂರೈಕೆದಾರರ ನಡುವೆ ನಡೆದ ಬಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದಗಳನ್ನು ಮರು ಪರಿಶೀಲಿಸುತ್ತಿದ್ದಾರೆ. 

ಚೀನಾದ ಪ್ರಮುಖ ಮೂರು ವಿಮಾನಯಾನ ಸಂಸ್ಥೆಗಳಾದ ‘ಏರ್‌ ಚೈನಾ’, ‘ಚೈನಾ ಈಸ್ಟರ್ನ್‌ ಏರ್‌ಲೈನ್ಸ್‌‘, ಹಾಗೂ ‘ಚೈನಾ ಸದರ್ನ್‌ ಏರ್‌ಲೈನ್ಸ್‌’ಗಳಿಗೆ 2025ರಿಂದ 2027ರ ಅವಧಿಗೆ ಬೋಯಿಂಗ್ ಸಂಸ್ಥೆಯು ಕ್ರಮವಾಗಿ 45, 53 ಹಾಗೂ 81 ವಿಮಾನಗಳನ್ನು ನೀಡುವ ಕುರಿತು ಒಪ್ಪಂದವಾಗಿದೆ.

‘ವಿಮಾನಕ್ಕೆ ಸಂಬಂಧಿಸಿದ ಬಿಡಿಭಾಗಗಳ ಖರೀದಿಯನ್ನು ಸ್ಥಗಿತಗೊಳಿಸುವಂತೆ ಚೀನಾ ಸರ್ಕಾರವು ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರದಿಂದ, ನಿರ್ವಹಣಾ ವೆಚ್ಚವು ಗಣನೀಯವಾಗಿ ಏರಿಕೆಯಾಗಲಿದ್ದು, ವೈಮಾನಿಕ ಕ್ಷೇತ್ರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ‘ಬ್ಲೂಮ್‌ಬರ್ಗ್‌ ನ್ಯೂಸ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.