ADVERTISEMENT

ಅರುಣಾಚಲ ಪ್ರದೇಶ ಭಾರತದ ಭಾಗ: ಅಮೆರಿಕದ ಬೆಂಬಲಕ್ಕೆ ಚೀನಾ ಆಕ್ಷೇಪ

ಪಿಟಿಐ
Published 21 ಮಾರ್ಚ್ 2024, 10:15 IST
Last Updated 21 ಮಾರ್ಚ್ 2024, 10:15 IST
ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ
ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರು– ಸಂಗ್ರಹ ಚಿತ್ರ   

ಬೀಜಿಂಗ್: ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಎಂಬುದನ್ನು ದೃಢೀಕರಿಸಿದ ಅಮೆರಿಕದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ‘ವಾಷಿಂಗ್ಟನ್‌ಗೆ ಭಾರತ ಮತ್ತು ಚೀನಾ ಗಡಿ ವಿವಾದ ಕುರಿತು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದಿದೆ.

‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂಬ ಅಮೆರಿಕದ ವಕ್ತಾರ ವೇದಾಂತ ಪಟೇಲ್‌ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚೀನಾ, ‘ತನ್ನ ಸ್ವಾರ್ಥ ಭೌಗೋಳಿಕ ರಾಜಕೀಯ ಹಿತಾಸಕ್ತಿಗಾಗಿ ಇತರ ರಾಷ್ಟ್ರಗಳ ವಿವಾದಗಳನ್ನು ಪ್ರಚೋದಿಸುವ ಕಾರ್ಯವನ್ನು ಬಿಡಬೇಕು’ ಎಂದು ಎಚ್ಚರಿಸಿದೆ.

‘ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ತನಗೆ ಸೇರಿದ ಜಾಗವೆಂದು ಏಕಪಕ್ಷೀಯವಾಗಿ ಹಕ್ಕುಸಾಧಿಸುವ ಚೀನಾದ ಪ್ರಯತ್ನವನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ’ ಎಂದು ಪಟೇಲ್ ಹೇಳಿದ್ದರು.

ADVERTISEMENT

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್‌, ‘ಅಮೆರಿಕದ ಹೇಳಿಕೆಯನ್ನು ಚೀನಾ ಕಡಾಖಂಡಿತವಾಗಿ ತಿರಸ್ಕರಿಸುತ್ತದೆ. ಭಾರತ ಮತ್ತು ಚೀನಾ ನಡುವಿನ ಗಡಿ ಗುರುತಿಸುವ ಕಾರ್ಯ ಪೂರ್ಣಗೊಂಡಿಲ್ಲ. ಝಾಂಗ್ನಾನ್‌ (ಅರುಣಾಚಲ ಪ್ರದೇಶಕ್ಕೆ ಚೀನಾ ಇಟ್ಟಿರುವ ಹೆಸರು) ಎಂದೆಂದಿಗೂ ಚೀನಾದ ಭಾಗ. ಇದನ್ನು ಯಾರೂ ನಿರಾಕರಿಸಲಾಗದ ಮೂಲ ಸತ್ಯ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಚೀನಾದ ಸೇನೆ ಈ ಭಾಗದ ಮೇಲೆ ಹಕ್ಕು ಸಾಧಿಸಲು ಮುಂದಾದ ನಂತರ ಅಮೆರಿಕ ಈ ಹೇಳಿಕೆ ನೀಡಿತ್ತು.

ಚೀನಾ ರಕ್ಷಣಾ ಮಂತ್ರಾಲಯದ ವಕ್ತಾರ ಹಿರಿಯ ಕರ್ನಲ್ ಝಾಂಗ್‌ ಷಿಯಾಗಾಂಗ್‌ ಅವರು ಮಾರ್ಚ್ 15ರಂದು ಹೇಳಿಕೆ ನೀಡಿ, ‘ಷಿಝಾಂಗ್‌ನ ದಕ್ಷಿಣ ಭಾಗ (ಟಿಬೆಟ್‌ಗೆ ಚೀನಾ ಇಟ್ಟಿರುವ ಹೆಸರು) ಚೀನಾದ ಅವಿಭಾಜ್ಯ ಅಂಗ. ಅರುಣಾಚಲ ಪ್ರದೇಶದ ಮೇಲೆ ಭಾರತವು ಅಕ್ರಮವಾಗಿ ತನ್ನ ಹಕ್ಕು ಸ್ಥಾಪಿಸುತ್ತಿದೆ. ಇದನ್ನು ಚೀನಾ ಎಂದಿಗೂ ಒಪ್ಪುವುದಿಲ್ಲ’ ಎಂದಿದ್ದರು.

ಅರುಣಾಚಲ ಪ್ರದೇಶದ ಪಶ್ಚಿಮದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಸೆಲಾ ಸುರಂಗವನ್ನು ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸುರಂಗವು ವರ್ಷದ ಎಲ್ಲಾ ಋತುವಿನಲ್ಳೂ ತವಾಂಗ್ ಜಿಲ್ಲೆ ಮತ್ತು ಅರುಣಾಚಲ ಪ್ರದೇಶ ನಡುವೆ ಸಂಪರ್ಕ ಕಲ್ಪಿಸುತ್ತದೆ. 

‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ಇದನ್ನು ಅತಿಕ್ರಮಿಸುವ ಚೀನಾದ ಕ್ರಮವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ’ ಎಂದು ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.