ADVERTISEMENT

ಶ್ರೀಲಂಕಾದಿಂದ ನಿರ್ಗಮಿಸಿದ ಚೀನಾದ ಬೇಹುಗಾರಿಕಾ ಹಡಗು

ಏಜೆನ್ಸೀಸ್
Published 22 ಆಗಸ್ಟ್ 2022, 13:23 IST
Last Updated 22 ಆಗಸ್ಟ್ 2022, 13:23 IST
 ‘ಯುವಾನ್ ವಾಂಗ್ 5’ ಹೆಸರಿನ ಚೀನಾ ನೌಕೆ
‘ಯುವಾನ್ ವಾಂಗ್ 5’ ಹೆಸರಿನ ಚೀನಾ ನೌಕೆ   

ಹಂಬಂಟೋಟಾ: ಭಾರತ ಮತ್ತು ಅಮೆರಿಕದ ಆಕ್ಷೇಪದ ಹೊರತಾಗಿಯೂ, ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಿದ್ದ ಚೀನಾದ ಬೇಹುಗಾರಿಕಾ ನೌಕೆ ಸೋಮವಾರ ಅಲ್ಲಿಂದ ನಿರ್ಗಮಿಸಿದೆ.

ಆಗಸ್ಟ್‌ 16ರಂದು ಶ್ರೀಲಂಕಾದ ಹಂಬಂಟೋಟದಲ್ಲಿರುವ, ಚೀನಾ ನಿರ್ಮಿತ ಬಂದರಿಗೆ ಬಂದಿದ್ದ ‘ಯುವಾನ್ ವಾಂಗ್ 5’ ಹೆಸರಿನ ಚೀನಾ ನೌಕೆ ಏಳು ದಿನಗಳ ಕಾಲ ಅಲ್ಲಿಯೇ ಲಂಗರು ಹಾಕಿತ್ತು.

ADVERTISEMENT

ಯಾವುದೇ ಬೆಹುಗಾರಿಕಾ ಚಟುವಟಿಕೆಗಳಲ್ಲಿ ತೊಡಗದಂತೆ ಷರತ್ತು ವಿಧಿಸಿ ಲಂಗರು ಹಾಕಲು ಹಡಗಿಗೆ ಶ್ರೀಲಂಕಾ ಸರ್ಕಾರ ಅವಕಾಶ ನೀಡಿತ್ತು.

ಹಡಗಿಗೆ ಶ್ರೀಲಂಕಾ ಪ್ರವೇಶ ನೀಡಿರುವ ಕುರಿತು ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಭದ್ರತಾ ಕಳವಳ ವ್ಯಕ್ತಪಡಿಸಿದ್ದವು. ಹೀಗಾಗಿ ಹಡಗಿಗೆ ಪ್ರವೇಶ ನೀಡುವುದನ್ನು ಶ್ರೀಲಂಕಾ ವಿಳಂಬ ಮಾಡಿತ್ತು. ನಂತರ ಲಂಗರು ಹಾಕಲು ಅನುಮತಿಸಿತ್ತು.

‘ನಮ್ಮ ಮಾರ್ಗದರ್ಶಕರು ಹಡಗಿನಲ್ಲಿದ್ದಾರೆ. ಹಡಗು ಬಂದರಿನಿಂದ ನಿರ್ಗಮಿಸುತ್ತಿದೆ’ ಎಂದು ಶ್ರೀಲಂಕಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಡಗಿಗೆ ಟಗ್ ಬೋಟ್‌ಗಳು ಮಾರ್ಗದರ್ಶನ ನೀಡಿದವು ಎಂದೂ ಅವರು ಹೇಳಿದರು.

ಚೀನಾದ ಜಿಯಾಂಗ್ಯಿನ್ ಬಂದರಿಗೆ ಹಡಗು ತೆರಳಿದೆ ಎಂದು ಅಧಿಕಾರಿಗಳು ಹೇಳಿದರು.

ಸುಮಾರು 400 ಸಿಬ್ಬಂದಿಯನ್ನು ಹೊಂದಿರುವ ನೌಕೆ, ಜುಲೈ ಮಧ್ಯದಲ್ಲಿ ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಿಯಾಂಗ್‌ಯಿನ್‌ನಿಂದ ಹೊರಟಿತ್ತು.

‘ಎರಡೂ ದೇಶಗಳ ನಡುವಿನ ಸಾಮಾನ್ಯ ವಿನಿಮಯದ’ ಭಾಗವಾಗಿ ಈ ನೌಕೆ ಶ್ರೀಲಂಕಾಕ್ಕೆ ಬಂದಿದೆ ಎಂದು ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿ ಕಿ ಝೆನ್‌ಹಾಂಗ್ ಹೇಳಿದ್ದರು.

ಏಷ್ಯಾ-ಯುರೋಪ್ ಮುಖ್ಯ ಹಡಗು ಮಾರ್ಗದ ಬಳಿಯಿರುವ ಹಂಬಂಟೋಟ ಬಂದರನ್ನು ಚೀನಾ ತನ್ನ ಮಿಲಿಟರಿ ನೆಲೆಯಾಗಿ ಪರಿವರ್ತಿಸಿಕೊಳ್ಳಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.

ಚೀನಾದ ‘ಯುವಾನ್‌ ವಾಂಗ್‌ 5’ ನೌಕೆಯು ಹೊಸ ಪೀಳಿಗೆಯ ಬಾಹ್ಯಾಕಾಶ ವಿಚಕ್ಷಣ ಹಡಗುಗಳಲ್ಲಿ ಒಂದು ಎಂದು ವಿದೇಶಿ ಭದ್ರತಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ಉಪಗ್ರಹ, ರಾಕೆಟ್ ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳ ಮೇಲೆ ಕಣ್ಣಿಡಲಿದೆ ಎಂದು ಹೇಳಿದ್ದಾರೆ.

‘ಯುವಾನ್ ವಾಂಗ್’ ಸರಣಿಯ ಹಡಗುಗಳನ್ನು ಚೀನಾ ಸೇನೆ – ‘ಪೀಪಲ್ಸ್‌ ಲಿಬರೇಷನ್‌ ಆರ್ಮಿ’ಯ (ಪಿಎಲ್‌ಎ) ‘ಕಾರ್ಯತಂತ್ರ ನೆರವು ಪಡೆ’ ನಿರ್ವಹಿಸುತ್ತದೆ ಎಂದು ಅಮೆರಿಕ ಹೇಳಿದೆ.

ಹಂಬಂಟೋಟ ಬಂದರನ್ನು ಚೀನಾ 2017ರಲ್ಲಿ ನಿರ್ಮಾಣ ಮಾಡಿದ್ದು, ಸರ್ಕಾರಿ ಸಂಸ್ಥೆಯೊಂದು ಅದನ್ನು ನಿರ್ವಹಣೆ ಮಾಡುತ್ತಿದೆ. ಬಂದರನ್ನು 99 ವರ್ಷಗಳ ಗುತ್ತಿಗೆಗೆ ಚೀನಾ ಪಡೆದುಕೊಂಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.