ADVERTISEMENT

ಸಂಸದ ಶಶಿ ತರೂರ್‌ ನೇತೃತ್ವದ ನಿಯೋಗ ಭೇಟಿ: ಪಾಕ್ ಪರ ಸಂತಾಪ ವಾಪಸ್ ಪಡೆದ ಕೊಲಂಬಿಯಾ

ಪಿಟಿಐ
Published 31 ಮೇ 2025, 16:23 IST
Last Updated 31 ಮೇ 2025, 16:23 IST
ಶಶಿ ತರೂರ್‌
ಶಶಿ ತರೂರ್‌   

ಬೊಗೊಟ: ಭಾರತದ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದ ಕೊಲಂಬಿಯಾ ಸರ್ಕಾರ, ಇದೀಗ ತನ್ನ ಸಂತಾಪದ ಪ್ರಕಟಣೆಯನ್ನು ಹಿಂದಕ್ಕೆ ಪಡೆದಿದೆ.

ಕೊಲಂಬಿಯಾಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನೇತೃತ್ವದ ಸರ್ವಪಕ್ಷಗಳ ಸಂಸದೀಯ ನಿಯೋಗ, ಅಲ್ಲಿನ ಸರ್ಕಾರದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯ ನಾಗರಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು ಎಂಬುದನ್ನು ಹಾಗೂ ಗಡಿಯಾಚೆಗಿನ ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನ ಹೇಗೆಲ್ಲ ಬೆಂಬಲ ನೀಡುತ್ತಿದೆ ಎಂಬುದನ್ನು ನಿಯೋಗವು ಕೊಲಂಬಿಯಾ ಸರ್ಕಾರಕ್ಕೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದೆ. 

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಶಶಿ ತರೂರು, ‘ನಿಯೋಗದ ಸದಸ್ಯರು ಕೊಲಂಬಿಯಾದ ಉಪ ವಿದೇಶಾಂಗ ಸಚಿವ ರೋಸಾ ಯೋಲಾಂಡಾ ವಿಲ್ಲಾವಿಸೆನ್ಸಿಯೊ ಮತ್ತು ಏಷ್ಯಾ ಪೆಸಿಫಿಕ್‌ ವಲಯದ ಉಸ್ತುವಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆವು. ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತದ ಸ್ಪಷ್ಟ ನಿಲುವನ್ನು ತಿಳಿಸಿದೆವು. ಅಲ್ಲದೆ ಕೊಲಂಬಿಯಾ ಸರ್ಕಾರ ಮೇ 8ರಂದು ಹೊರಡಿಸಿದ್ದ ಸಂತಾಪ ಪ್ರಕಟಣೆಗೆ ಅಸಮಾಧಾನ ವ್ಯಕ್ತಪಡಿಸಿದೆವು’ ಎಂದು ತಿಳಿಸಿದರು.

‘ವಿಷಯ ಮನದಟ್ಟು ಮಾಡಿಕೊಂಡ ಉಪ ವಿದೇಶಾಂಗ ಸಚಿವರು ಸಂತಾಪ ಪ್ರಕಟಣೆಯನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು. ಅಲ್ಲದೆ ಭಾರತದ ನಿಲುವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಬೆಂಬಲವನ್ನೂ ವ್ಯಕ್ತಪಡಿಸಿದರು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.