ADVERTISEMENT

ಕೊರೊನಾ ಲಾಕ್‌ಡೌನ್ ಅವಧಿಪೂರ್ವ ತೆರವು ಮಾಡಬೇಡಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಪಿಟಿಐ
Published 11 ಏಪ್ರಿಲ್ 2020, 7:06 IST
Last Updated 11 ಏಪ್ರಿಲ್ 2020, 7:06 IST
ಡಬ್ಲ್ಯುಎಚ್‌ಒ ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ –ರಾಯಿಟರ್ಸ್ ಚಿತ್ರ
ಡಬ್ಲ್ಯುಎಚ್‌ಒ ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ –ರಾಯಿಟರ್ಸ್ ಚಿತ್ರ   

ಜಿನೇವಾ: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅವಧಿಪೂರ್ವ ತೆರವು ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ. ಲಾಕ್‌ಡೌನ್‌ ಅವಧಿಪೂರ್ವ ತೆರವು ಮಾರಕ ಕೊರೊನಾ ವೈರಸ್‌ ಹರಡುವಿಕೆಯ ಪುನರುತ್ಥಾನಕ್ಕೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.

ಕೆಲವು ದೇಶಗಳು ನಿರ್ಬಂಧಗಳನ್ನು ತೆರವುಗೊಳಿಸುವ ಮಾರ್ಗಗಳ ಬಗ್ಗೆ ಆಲೋಚಿಸುತ್ತಿವೆ. ತುಂಬಾ ಬೇಗನೇ ಲಾಕ್‌ಡೌನ್ ತೆರವುಗೊಳಿಸುವುದು ಅಪಾಯಕಾರಿ ಎಂದು ಡಬ್ಲ್ಯುಎಚ್‌ಒ ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

‘ಮನೆಯಲ್ಲೇ ಇರಿ ಎಂದು ವಿಧಿಸಲಾಗಿರುವ ನಿರ್ಬಂಧಗಳನ್ನು ತೆರವುಗೊಳಿಸಲು ಕೆಲವು ದೇಶಗಳು ಮುಂದಾಗಿರುವುದು ನನಗೆ ತಿಳಿದಿದೆ. ಆದರೆ, ಸರಿಯಾಗಿ ನಿರ್ವಹಿಸದೇ ಹೋದರೆ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗಲಿದೆ. ನಿರ್ಬಂಧಗಳನ್ನು ಕ್ರಮೇಣ ಮತ್ತು ಸುರಕ್ಷಿತವಾಗಿ ತೆರವುಗೊಳಿಸುವ ತಂತ್ರಗಳ ಕುರಿತು ಕೊರೊನಾದಿಂದ ಅತಿಹೆಚ್ಚು ಸಮಸ್ಯೆಗೆ ಈಡಾಗಿರುವ ರಾಷ್ಟ್ರಗಳ ಜತೆ ಡಬ್ಲ್ಯುಎಚ್‌ಒ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

6 ಅಂಶ ಗಮನದಲ್ಲಿಟ್ಟುಕೊಳ್ಳಿ: ನಿರ್ಬಂಧಗಳನ್ನು ತೆರವುಗೊಳಿಸುವ ಮುನ್ನ ಆರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಅವುಗಳು ಹೀಗಿವೆ:

* ಸೋಂಕು ಹರಡುವಿಕೆ ನಿಯಂತ್ರಣ

* ಸಾರ್ವಜನಿಕ ಆರೋಗ್ಯ ಸೇವೆಗಳ ಲಭ್ಯತೆ

* ಕ್ವಾರಂಟೈನ್ ಕೇಂದ್ರಗಳಲ್ಲಿ ಔಟ್‌ಬ್ರೇಕ್‌ ಅಪಾಯ ಕಡಿಮೆ ಇರುವಂತೆ ನೋಡಿಕೊಳ್ಳುವುದು

* ಕೆಲಸದ ಸ್ಥಳಗಳು ಮತ್ತು ಶಾಲೆಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳು

* ಬೇರೆಡೆಗಳಿಂದ ವೈರಸ್ ಬರದಂತೆ ತಡೆಯಲು ಕ್ರಮಗಳು

* ಸಮುದಾಯಗಳಲ್ಲಿ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ

ಇವಿಷ್ಟು ಅಂಶ ಗಮನದಲ್ಲಿಟ್ಟುಕೊಂಡು ಮತ್ತು ಈ ವಿಚಾರಗಳಲ್ಲಿ ಸಿದ್ಧತೆ ಮಾಡಿಕೊಂಡೇ ನಿರ್ಬಂಧಗಳನ್ನು ತೆರವುಗೊಳಿಸಬಹುದು ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.

ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೊನಾ ವೈರಸ್ ಸೋಂಕಿಗೆ ಶುಕ್ರವಾರದ ವೇಳೆಗೆ ವಿಶ್ವದಾದ್ಯಂತ 1,00,376 ಜನ ಮೃತಪಟ್ಟಿದ್ದಾರೆ. 16.19 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.