ADVERTISEMENT

ದಲೈಲಾಮಾ ಉತ್ತರಾಧಿಕಾರಿ ನೇಮಕ: ಟಿಬೆಟ್ ವಿಷಯದಲ್ಲಿ ಭಾರತ ಎಚ್ಚರ ವಹಿಸಲಿ ಎಂದ ಚೀನಾ

ಪಿಟಿಐ
Published 4 ಜುಲೈ 2025, 11:19 IST
Last Updated 4 ಜುಲೈ 2025, 11:19 IST
<div class="paragraphs"><p>ದಲೈಲಾಮಾ</p></div>

ದಲೈಲಾಮಾ

   

ಬೀಜಿಂಗ್: ಉತ್ತರಾಧಿಕಾರಿ ನೇಮಕದಲ್ಲಿ ತಮ್ಮ ಆಶಯದಂತೆಯೇ ದಲೈ ಲಾಮಾ ನಡೆದುಕೊಳ್ಳಲಿ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ, ‘ಟಿಬೆಟ್ ವಿಷಯದಲ್ಲಿ ಭಾರತವು ಎಚ್ಚರ ವಹಿಸುವುದು ಸೂಕ್ತ’ ಎಂದಿದ್ದಾರೆ.

‘14ನೇ ದಲೈ ಲಾಮಾ ಅವರ ಚೀನಾ ವಿರೋಧಿ ನೀತಿಯ ಪ್ರತ್ಯೇಕತಾವಾದಿ ಮನಸ್ಥಿತಿಗೆ ಸಂಬಂಧಿಸಿದಂತೆ ಭಾರತವು ತನ್ನ ನಿಲುವನನ್ನು ಸ್ಪಷ್ಟಪಡಿಸಬೇಕು. ಜತೆಗೆ ಷಿಜಾಂಗ್‌ (ಟಿಬೆಟ್) ವಿಷಯದಲ್ಲೂ ಚೀನಾದ ಹೇಳಿಕೆಗಳನ್ನು ಭಾರತ ಗೌರವಿಸಬೇಕು’ ಎಂದು ರಿಜಿಜು ಹೇಳಿಕೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್‌ ಹೇಳಿದ್ದಾರೆ.

ADVERTISEMENT

‘ಚೀನಾದ ಆಂತರಿಕ ವಿಷಯದಲ್ಲಿ ಭಾರತ ಮಧ್ಯಪ್ರವೇಶಿಸಬಾರದು ಮತ್ತು ಇಂಥ ವಿಷಯಗಳಲ್ಲಿ ಎಚ್ಚರವಹಿಸಬೇಕು. ಷಿಜಾಂಗ್‌ (ಟಿಬೆಟ್‌) ವಿಷಯವು ಭಾರತ ಮತ್ತು ಚೀನಾ ನಡುವಿನ ಅಭಿವೃದ್ಧಿಗೆ ತೊಡಕಾಗದಂತೆ ಎಚ್ಚರವಹಿಸಬೇಕು’ ಎಂದಿದ್ದಾರೆ.

ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ರಿಜಿಜು ಅವರು ಅಧಿಕೃತ ಹೇಳಿಕೆ ನೀಡಿದವರಲ್ಲಿ ಮೊದಲಿಗರು. 

ಟಿಬೆಟ್‌ನ ಧಾರ್ಮಿಕ ಗುರು ದಲೈ ಲಾಮ ಅವರು ತಾವೇ 2015ರಲ್ಲಿ ಸ್ಥಾಪಿಸಿದ ಗಾಡೆನ್ ಫೊಡ್ರಾಂಗ್‌ ಟ್ರಸ್ಟ್‌ನ ಮೂಲಕವೇ ಉತ್ತರಾಧಿಕಾರಿ ನೇಮಕವಾಗಲಿದೆ. ತನ್ನ ಪುನರ್ಜನ್ಮದ ಮೂಲಕವೇ ಭವಿಷ್ಯದ ದಲೈ ಲಾಮಾ ಅಧಿಕಾರಕ್ಕೆ ಬರಲಿದ್ದು, ಅವರನ್ನು ಗುರುತಿಸುವ ಅಧಿಕಾರ ತನಗಿದೆ ಎಂದು 14ನೇ ದಲೈ ಲಾಮಾ ಹೇಳಿದ್ದರು.

ಆದರೆ ನೋಬೆಲ್ ಶಾಂತಿ ಪ್ರಶಸ್ತಿಯ ಪುರಸ್ಕೃತ ಧಾರ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿಯ ನೇಮಕ ಮರು ಜನ್ಮದ ಮೂಲಕವಾಗಲಿದೆ ಎಂಬ ಹೇಳಿಕೆ ಹೊರಬಿದ್ದಿತ್ತು. ನೇಮಕ ಪ್ರಕ್ರಿಯೆಯನ್ನು ದಲೈ ಲಾಮಾ ಅವರೇ ನಡೆಸಬೇಕು ಎಂದು ರಿಜಿಜು ಹೇಳಿಕೆ ನೀಡಿದ್ದರು.

ಬೌದ್ಧ ಧರ್ಮ ಪಾಲಿಸುವ ರಿಜಿಜು ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಜುಲೈ 6ರಂದು ಧರ್ಮಶಾಲಾದಲ್ಲಿ ನಡೆಯಲಿರುವ ದಲೈ ಲಾಮಾ ಅವರ 90ನೇ ಜನ್ಮದಿನ ಆಚರಣೆಯಲ್ಲಿ ಸರ್ಕಾರದ ಪರವಾಗಿ ಪಾಲ್ಗೊಳ್ಳಲಿದ್ದಾರೆ. ‘ಇದು ಧಾರ್ಮಿಕ ಕಾರ್ಯಕ್ರಮವೇ ಹೊರತು, ಇದರಲ್ಲಿ ರಾಜಕೀಯ ವೇದಿಕೆಯಲ್ಲ’ ಎಂದಿದ್ದಾರೆ.

ದಲೈ ಲಾಮಾ ಮತ್ತು ಎರಡನೇ ಪ್ರಧಾನ ಅರ್ಚಕ ಪಂಚೆನ್‌ ಲಾಮಾ ಅವರ ಉತ್ತರಾಧಿಕಾರಿ ನೇಮಕವು ಕಠಿಣ ಧಾರ್ಮಿಕ ಪದ್ಧತಿಗಳು ಮತ್ತು ಐತಿಹಾಸಿಕ ಸಮಾವೇಶದ ಮೂಲಕ ನಡೆಯಬೇಕು. ಕೇಂದ್ರ ಸರ್ಕಾರದ ಒಪ್ಪಿಗೆ ಮತ್ತು ಚಿನ್ನದ ಬಟ್ಟಲಿನ ಪ್ರಯೋಗ ಅಗತ್ಯ. 14ನೇ ದಲೈ ಲಾಮಾ ಅವರ ನೇಮಕದಲ್ಲೂ ಕೇಂದ್ರ ಸರ್ಕಾರವು ಇದೇ ಮಾದರಿಯ ಆಯ್ಕೆ ಪ್ರಕ್ರಿಯೆ ನಡೆಸಿತ್ತು. 

ಕಳೆದ ವರ್ಷ ರಷ್ಯಾದ ಕಝಾನ್‌ನಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಅವರ ನಡುವೆ ಉನ್ನತ ಮಟ್ಟದ ಸಭೆ ನಡೆದಿತ್ತು. ಇದರ ನಂತರದಲ್ಲಿ ಕೈಲಾಶ ಮತ್ತು ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಭಾರತೀಯರಿಗೆ ಅವಕಾಶ ಕಲ್ಪಿಸಲಾಗಿತ್ತು. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಯ ಭಾಗವಾಗಿ ಇದೇ ಮೊದಲ ವರ್ಷ ಈ ಯಾತ್ರೆ ಆರಂಭಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.