ADVERTISEMENT

ಸೈಪ್ರಸ್‌ ಕಡಲ ತಡಿಗೆ ಬಂದು ಬೀಳುತ್ತಿವೆ ಮೃತ ತಿಮಿಂಗಿಲಗಳು: ಭೂಕಂಪ ಪರಿಣಾಮ ಶಂಕೆ!

ಐಎಎನ್ಎಸ್
Published 11 ಫೆಬ್ರುವರಿ 2023, 2:22 IST
Last Updated 11 ಫೆಬ್ರುವರಿ 2023, 2:22 IST
ಸೈಪ್ರಸ್‌ ಕಡಲ ತೀರಕ್ಕೆ ಬಂದು ಬಿದ್ದಿದ್ದ ತಿಮಿಂಗಿಲ
ಸೈಪ್ರಸ್‌ ಕಡಲ ತೀರಕ್ಕೆ ಬಂದು ಬಿದ್ದಿದ್ದ ತಿಮಿಂಗಿಲ    

ನಿಕೋಸಿಯಾ: ಟರ್ಕಿಯ ಭೂಕಂಪದ ಕೇಂದ್ರ ಬಿಂದುವಿಗೆ ಹತ್ತಿರದಲ್ಲಿರುವ ಉತ್ತರ ಸೈಪ್ರಸ್‌ನ ಕಡಲ ಕಿನಾರೆಗೆ ಕಳೆದ ಕೆಲವು ದಿನಗಳಿಂದ ಮೃತ ತಿಮಿಂಗಿಲಗಳು ತೇಲಿ ಬರುತ್ತಿವೆ. ಭೂಕಂಪದ ಪರಿಣಾಮವಾಗಿ ತಿಮಿಂಗಿಲಗಳು ಸಾವಿಗೀಡಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಪರೂಪದ ಕ್ಯುವಿಯರ್‌–ಕೊಕ್ಕಿನ ತಿಮಿಂಗಿಲಗಳು ಪೋಲಿಸ್ ಕ್ರಿಸೋಚಸ್ ನಗರದ ಪೂರ್ವ ತೀರಕ್ಕೆ ಬಂದು ಬೀಳುತ್ತಿವೆ ಎಂದು ಸೈಪ್ರಸ್‌ ಮೀನುಗಾರಿಕೆ ಇಲಾಖೆಯ ಅಧಿಕಾರಿ ಯಿಯಾನೋಸ್ ಐಯೊನೌ ಹೇಳಿದ್ದಾರೆ.

ಗುರುವಾರ ಪತ್ತೆಯಾದ ನಾಲ್ಕು ತಿಮಿಂಗಿಲಗಳಲ್ಲಿ ಎರಡು ಇನ್ನೂ ಜೀವಂತವಾಗಿದ್ದವು. ಅವುಗಳಿಗೆ ಹಾನಿಯೂ ಆಗಿರಲ್ಲಿಲ್ಲ. ಸ್ಥಳೀಯ ಯುವ ಕೇಂದ್ರದ ಸ್ವಯಂಸೇವಕರು ಅವುಗಳನ್ನು ಮತ್ತೆ ಸಮುದ್ರಕ್ಕೆ ತಳ್ಳಿದರು ಎಂದು ಐಯೊನೌ ಹೇಳಿದರು.

ADVERTISEMENT

ಟರ್ಕಿಯ ಸೇನೆಯಿಂದ ನಿಯಂತ್ರಿಸಲ್ಪಡುವ ಉತ್ತರದ ಕಡಲತೀರಗಳಲ್ಲಿ ಶುಕ್ರವಾರ ಮತ್ತೆ ಮೂರು ತಿಮಿಂಗಿಲಗಳು ಪತ್ತೆಯಾಗಿದ್ದವು ಎಂದು ಸುದ್ದಿ ಮಾಧ್ಯಮ ‘ಕ್ಸಿನ್ಹುವಾ’ ವರದಿ ಮಾಡಿದೆ.

‘ಟರ್ಕಿ ಭೂಕಂಪದ ಕೇಂದ್ರಬಿಂದುವಿನ ಸಮೀಪವಿರುವ ಸೈಪ್ರಸ್‌ ಕರಾವಳಿಯಲ್ಲಿ ತಿಮಿಂಗಿಲಗಳು ಹೀಗೆ ಸಾಮೂಹಿಕವಾಗಿ ಬಂದು ಬೀಳುತ್ತಿರುವುದು ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಅವುಗಳ ಸಾವಿಗೆ ಭೂಕಂಪವೂ ಕಾರಣವಾಗಿರಬಹುದು’ ಎಂದು ರಾಷ್ಟ್ರೀಯ ರೇಡಿಯೊ ಸಿಬಿಸಿಗೆ ಐಯೊನೌ ಹೇಳಿದ್ದಾರೆ.

ತೀರಕ್ಕೆ ಬಂದು ಬಿದ್ದಿದ್ದ ಕೆಲವು ತಿಮಿಂಗಿಲಗಳನ್ನು ಗುರುವಾರ ಮತ್ತೆ ಸಮುದ್ರಕ್ಕೆ ತಳ್ಳಲಾಗಿತ್ತು. ಇದೇ ತಿಮಿಂಗಿಲಗಳು ಶುಕ್ರವಾರವೂ ತೀರಕ್ಕೆ ಬಂದು ಬಿದ್ದಿರುವ ಸಾಧ್ಯತೆಗಳೂ ಇವೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರದೇಶದ ಪರಿಸರ ವ್ಯವಸ್ಥೆಯ ಮೇಲೆ ಆಗಿರುವ ಭೂಕಂಪದ ಪರಿಣಾಮಗಳಿಂದ ಅವು ಸತ್ತಿವೆಯೇ ಎಂಬುದನ್ನು ಪತ್ತೆಹಚ್ಚಲು ಮೀನುಗಾರಿಕಾ ಇಲಾಖೆಯ ತಜ್ಞರು ಈಗ ತಿಮಿಂಗಿಲಗಳ ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಐಯೊನೌ ಹೇಳಿದರು.

ಯುದ್ಧನೌಕೆಗಳ ಸಮರಭ್ಯಾಸ, ಹೈಡ್ರೋಕಾರ್ಬನ್‌ಗಳ ಪತ್ತೆಗಾಗಿ ನಡೆಯುವ ಕಾರ್ಯಾಚರಣೆಯೂ ತಿಮಿಂಗಿಲಗಳ ಸಾಮೂಹಿಕ ಸಾವಿಗೆ ಕಾರಣವಾಗಬಹುದು. ಆದರೆ, ಇತ್ತೀಚೆಗೆ ಇಂಥ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದರು.

ಟರ್ಕಿಯಲ್ಲಿ ಫೆ.6ರಂದು ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ಟರ್ಕಿ ಮತ್ತು ಸಿರಿಯಾಗಳಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ಈ ವರೆಗೆ 23 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರಬಲ ಭೂಕಂಪಗಳ ನಂತರವೂ ಅಲ್ಲಿ ನಿರಂತರವಾಗಿ ಭೂಮಿ ಕಂಪಿಸಿದೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.