ADVERTISEMENT

ಪ್ರಧಾನಿ ಮೋದಿ ಅದನ್ನು ನೋಡಬಾರದು ಎಂದು ಬಯಸಿದ್ದೆ: ಟ್ರಂಪ್ ಹೀಗೆ ಹೇಳಿದ್ದೇಕೆ?

ಪಿಟಿಐ
Published 15 ಮಾರ್ಚ್ 2025, 4:43 IST
Last Updated 15 ಮಾರ್ಚ್ 2025, 4:43 IST
<div class="paragraphs"><p>ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್</p></div>

ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್

   

(ಪಿಟಿಐ ಚಿತ್ರ)

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೀಚುಬರಹ, ಗುಂಡಿಗಳನ್ನು ನೋಡಬಾರದು ಎಂದು ಬಯಸಿದ್ದೆ. ಅದಕ್ಕಾಗಿ ಅಮೆರಿಕದ ರಾಜಧಾನಿಯನ್ನು ಸ್ವಚ್ಛಗೊಳಿಸಲು ನಿರ್ದೇಶಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ADVERTISEMENT

'ನಾವು ನಮ್ಮ ಈ ಮಹಾನ್ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇಲ್ಲಿ ಅಪರಾಧ ಕೃತ್ಯ ನಡೆಯಲು ಬಿಡುವುದಿಲ್ಲ. ಅಪರಾಧ ಕೃತ್ಯಗಳನ್ನು ನಾವು ಬೆಂಬಲಿಸುವುದಿಲ್ಲ. ಫೆಡರಲ್ ಕಟ್ಟಡಗಳಲ್ಲಿ ಗೀಚುಬರಹಗಳನ್ನು ಅಳಿಸಿಹಾಕಲಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ಹೇಳಿದ್ದಾರೆ.

ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ವಾಷಿಂಗ್ಟನ್ ಡಿಸಿಯ ಮೇಯರ್ ಮುರಿಯಲ್ ಬೌಸರ್ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.

'ಇಡೀ ಜಗತ್ತೇ ಚರ್ಚಿಸುವಂತಹ ಸ್ವಚ್ಛ ರಾಜಧಾನಿಯನ್ನು ಹೊಂದಲು ನಾವು ಬಯಸುತ್ತೇವೆ' ಎಂದು ಟ್ರಂಪ್ ತಿಳಿಸಿದ್ದಾರೆ.

'ಕಳೆದ ಕೆಲವು ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ, ಬ್ರಿಟನ್ ಪ್ರಧಾನಿ ಸೇರಿದಂತೆ ಜಾಗತಿಕ ನಾಯಕರು ನನ್ನನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದರು. ಇಲ್ಲಿನ ಗೀಚುಬರಹ, ರಸ್ತೆಗಳಲ್ಲಿನ ಗುಂಡಿಗಳನ್ನು ಅವರು ನೋಡಬೇಕೆಂದು ನಾನು ಬಯಸಿರಲಿಲ್ಲ. ನಮ್ಮ ನಗರ ಸುಂದರವಾಗಿ ಕಾಣುವಂತೆ ಮಾಡಿದ್ದೇವೆ' ಎಂದು ಅವರು ಹೇಳಿದ್ದಾರೆ.

'ವಾಷಿಂಗ್ಟನ್ ಅನ್ನು ನಾವು ಅಪರಾಧ ಮುಕ್ತ ರಾಜಧಾನಿಯನ್ನಾಗಿ ಮಾಡಲಿದ್ದೇವೆ. ಇಲ್ಲಿಗೆ ಜನರು ಭೇಟಿ ನೀಡಿದಾಗ ಅವರ ಮೇಲೆ ದರೋಡೆ, ಅತ್ಯಾಚಾರ ನಡೆಯಲು ಬಿಡುವುದಿಲ್ಲ ಎಂದು ಖಾತ್ರಿಪಡಿಸಲಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚು ಸ್ವಚ್ಛ, ಸುರಕ್ಷಿತ ನಗರವನ್ನಾಗಿ ಮಾರ್ಪಾಡು ಮಾಡಲಿದ್ದೇವೆ' ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ 13ರಂದು ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.