ADVERTISEMENT

ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2025, 2:40 IST
Last Updated 3 ಡಿಸೆಂಬರ್ 2025, 2:40 IST
<div class="paragraphs"><p>ಶ್ರೀಲಂಕಾದಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಹಂಚಿಕೊಂಡಿದೆ ಎನ್ನಲಾದ ಪೋಸ್ಟ್‌</p></div>

ಶ್ರೀಲಂಕಾದಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಹಂಚಿಕೊಂಡಿದೆ ಎನ್ನಲಾದ ಪೋಸ್ಟ್‌

   

ಕೃಪೆ: ಎಕ್ಸ್‌

ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

ADVERTISEMENT

ಪಾಕಿಸ್ತಾನವು ಶ್ರೀಲಂಕಾಗೆ ಇತ್ತೀಚೆಗೆ ಆಹಾರ ಸಾಮಗ್ರಿಗಳನ್ನು ಪೂರೈಸಿತ್ತು. ಶ್ರೀಲಂಕಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಅದಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡು, 'ಸಂಕಷ್ಟಕ್ಕೆ ಸಿಲುಕಿರುವ ಸಹೋದರ, ಸಹೋದರಿಯರಿಗೆ ನೆರವಾಗುವ ಸಲುವಾಗಿ ಕಳುಹಿಸಿದ್ದ ಪರಿಹಾರ ಪ್ಯಾಕೇಜ್‌ ಯಶಸ್ವಿಯಾಗಿ ತಲುಪಿವೆ. ಇದು, ನಮ್ಮ ಅಚಲವಾದ ಒಗ್ಗಟ್ಟನ್ನು ಸೂಚಿಸುತ್ತದೆ. ಪಾಕಿಸ್ತಾನ ಶ್ರೀಲಂಕಾದೊಂದಿಗೆ ಸದಾ ನಿಲ್ಲುತ್ತದೆ' ಎಂದು ಬರೆದುಕೊಂಡಿತ್ತು. ಅದರೊಂದಿಗೆ, ಆಹಾರ ಪೊಟ್ಟಣಗಳ ಕೆಲವು ಚಿತ್ರಗಳನ್ನೂ ಹಂಚಿಕೊಂಡಿತ್ತು.

ಚಿತ್ರಗಳ ಮೇಲೆ ನಮೂದಾಗಿರುವ ಎಕ್ಸ್‌ಪೆರಿ (ಅವಧಿ ಮುಕ್ತಾಯ) ದಿನಾಂಕವನ್ನು ಗಮನಿಸಿರುವ ಕೆಲ ನೆಟ್ಟಿಗರು, ಪಾಕಿಸ್ತಾನವು ಬಳಕೆಗೆ ಯೋಗ್ಯವಲ್ಲದ ಆಹಾರವನ್ನು ಕಳುಹಿಸಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

'ಪಾಕಿಸ್ತಾನ ಕಳುಹಿಸಿರುವ ಆಹಾರ ಪೊಟ್ಟಣಗಳ ಅವಧಿಯು 2024ರ ಅಕ್ಟೋಬರ್‌ನಲ್ಲೇ ಮುಕ್ತಾಯವಾಗಿದೆ' ಎಂಬುದನ್ನು ಒತ್ತಿ ಹೇಳಿರುವ ನೆಟ್ಟಿಗರು, ಪಾಕಿಸ್ತಾನದ ಕ್ಷಮತೆ ಮತ್ತು ಸಂವೇದನಾಶೀಲತೆಯನ್ನು ಪ್ರಶ್ನಿಸಿದ್ದಾರೆ. ‘ಇದು ಪ್ರವಾಹ ಸಂತ್ರಸ್ತರಿಗೆ ತೋರಿದ ಅಗೌರವವಾಗಿದೆ‘ ಎಂದು ವಾಗ್ದಾಳಿ ನಡೆಸುತ್ತಲೇ, ಫೋಟೊಗಳನ್ನು ಹಂಚಿಕೊಳ್ಳುವ ಮೊದಲೂ ಯಾರೊಬ್ಬರೂ ಅದರಲ್ಲಿನ ಲೇಬಲ್‌ಗಳನ್ನು ಪರಿಶೀಲಿಸಲಿಲ್ಲವೇ? ಎಂದು ಕೇಳಿದ್ದಾರೆ.

ಈ ಆರೋಪಗಳ ಕುರಿತು ಪಾಕಿಸ್ತಾನದಿಂದ ಸದ್ಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಆ ದೇಶಕ್ಕೆ ಸಂಬಂಧಿಸಿದ ನಿರ್ದಿಷ್ಟ ಟ್ವಿಟರ್‌ ಖಾತೆಯಲ್ಲಿ ಪರಿಹಾರ ಕುರಿತಾದ ಪೋಸ್ಟ್‌ ಕಾಣುತ್ತಿಲ್ಲ. ಅದನ್ನು ಅಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇನ್ನಷ್ಟೇ ಖಚಿತವಾಗಬೇಕಿದೆ.

ಭಾರತದಿಂದ ನೆರವು
ಪ್ರವಾಹ ಪೀಡಿತ ಶ್ರೀಲಂಕಾದಲ್ಲಿ ಇದುವರೆಗೆ 420ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟು, 340ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ನೆರೆ ರಾಷ್ಟ್ರಕ್ಕೆ ಭಾರತ ಸಂಪೂರ್ಣ ಬೆಂಬಲ ಘೋಷಿಸಿದ್ದು, ಮಾನವೀಯ ನೆರವು ಕಾರ್ಯಾಚರಣೆ ಆರಂಭಿಸಿದೆ.

'ಆಪರೇಷನ್‌ ಸಾಗರ್ ಬಂಧು' ಹೆಸರಿನಲ್ಲಿ ನವೆಂಬರ್‌ 28ರಿಂದ ಇಲ್ಲಿಯವರೆಗೆ 53 ಟನ್‌ ಪರಿಹಾರ ಸಾಮಗ್ರಿಗಳನ್ನು ಸಮುದ್ರ ಮತ್ತು ವಾಯು ಮಾರ್ಗದಲ್ಲಿ ರವಾನಿಸಿದೆ. ನೌಕಾಪಡೆಯ ಐಎನ್‌ಎಸ್‌ ವಿಕ್ರಾಂತ್‌, ಐಎನ್‌ಎಸ್‌ ಉದಯಗಿರಿ, ಐಎನ್‌ಎಸ್‌ ಸುಕನ್ಯಾ ಹಾಗೂ ವಾಯುಪಡೆಯ ವಿಮಾನಗಳ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ.

ಭಾರತದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್‌) ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, 150ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ. ಗರ್ಭಿಣಿಯರು, ಮಕ್ಕಳು ಸೇರಿಂತೆ ತೀವ್ರವಾಗಿ ಗಾಯಗೊಂಡಿರುವವರನ್ನು ಸ್ಥಳಾಂತರಿಸಲಾಗಿದೆ. ಶ್ರೀಲಂಕಾ, ಭಾರತ ಮಾತ್ರವಲ್ಲದೆ, ಇತರ ಕೆಲ ದೇಶಗಳ ಪ್ರಜೆಗಳೂ ರಕ್ಷಣೆಗೊಳಗಾದವರ ಪಟ್ಟಿಯಲ್ಲಿದ್ದಾರೆ.

ಭಾರತವು ಆರಂಭದಲ್ಲಿ 9.5 ಟನ್‌ಗಳಷ್ಟು ತುರ್ತು ಪಡಿತರವನ್ನು ಕಳುಹಿಸಿತ್ತು. ನಂತರ, ಟೆಂಟ್‌ಗಳು, ಔಷಧಗಳು, ನೈರ್ಮಲ್ಯ ಕಿಟ್‌, ವೈದ್ಯಕೀಯ ಘಟಕಗಳು ಸೇರಿದಂತೆ 31.5 ಟನ್‌ಗಳಷ್ಟು ಸಾಮಗ್ರಿಗಳನ್ನು ಹಾಗೂ 80 ಸಿಬ್ಬಂದಿಯನ್ನೊಳಗೊಂಡ ಎನ್‌ಡಿಆರ್‌ಎಫ್‌ ತಂಡವನ್ನು ಕಳಹಿಸಿತ್ತು. ಮತ್ತೆ 12 ಟನ್ ಸಾಮಗ್ರಿಗಳನ್ನು ಐಎನ್‌ಎಸ್‌ ಸುಕನ್ಯಾ ಮೂಲಕ ರವಾನಿಸಿದೆ.

ವಾಯಪಡೆಯ ಸಿ-130ಜೆ ಮತ್ತು ಐಎಲ್‌-76 ವಿಮಾನಗಳು ಕಾರ್ಯಾಚರಣೆ ಮುಂದುವರಿಸಿವೆ.

2,000ಕ್ಕೂ ಅಧಿಕ ಭಾರತೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.