ADVERTISEMENT

ತಂಬಾಕು ಸೇವನೆ | 10 ಜನರಲ್ಲಿ ಒಬ್ಬರು ಹೃದಯ ರೋಗದಿಂದ ಸಾವು–ವಿಶ್ವ ಆರೋಗ್ಯ ಸಂಸ್ಥೆ

ತಂಬಾಕು ಪ್ರತಿವರ್ಷ 80 ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 7:16 IST
Last Updated 26 ಜೂನ್ 2019, 7:16 IST
ಚಿತ್ರ: ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್‌
ಚಿತ್ರ: ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್‌   

ವಿಶ್ವಸಂಸ್ಥೆ:‌ತಂಬಾಕು ಸೇವನೆ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದು, 10 ಜನರಲ್ಲಿ ಒಬ್ಬರು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ಹತ್ತರಲ್ಲಿ ಒಬ್ಬರು ಹೃದ್ರೋಗಗಳಿಂದ ಸಾಯಲು ತಂಬಾಕು ಕಾರಣ ಎಂಬುದು ನಿಮಗೆ ತಿಳಿದಿದೆಯೇ? ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ತಂಬಾಕಿನಿಂದ ದೂರವಿದ್ದು, ನಿಮ್ಮ ಹೃದಯವನ್ನು ರಕ್ಷಿಸಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದೆ.

ಪ್ರಾಯೋಜಕತ್ವ ನಿಷೇಧ ಹೇರಬೇಕು

ADVERTISEMENT

ತಂಬಾಕು ಸೇವನೆಯಿಂದಾಗುವ ಸಾವುಗಳನ್ನು ತಡೆಯಲು,ಪರೋಕ್ಷವಾಗಿ ತಂಬಾಕು ಸೇವನೆಗೆ ಪ್ರಚೋದಿಸುವ ಎಲ್ಲಾ ರೀತಿಯ ತಂಬಾಕು ಜಾಹೀರಾತುಗಳು ಮತ್ತು ಪ್ರಾಯೋಜಕತ್ವವನ್ನು ನಿಷೇಧಿಸಬೇಕು. ಸಂಗೀತ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಪ್ರಾಯೋಜಕತ್ವ ವಹಿಸುವುದನ್ನೂ ನಿಷೇಧಿಸಬೇಕು ಎಂದು ಹೇಳಿದೆ.

ತಂಬಾಕು ರಹಿತ ಉತ್ಪನ್ನಗಳ ಬಳಕೆ ಮಾಡುವಂತೆ ತಂಬಾಕು ಬ್ರಾಂಡ್‌ಗಳು ಅಥವಾ ಕಂಪನಿಗಳನ್ನು ಉತ್ತೇಜಿಸಬೇಕು ಎಂದು ಹೇಳಿದೆ. ಜತೆಗೆ, ಸೆಲಬ್ರಿಟಿಗಳೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದೆ.

ಪ್ರಮುಖ ಅಂಶಗಳು

* ತಂಬಾಕು ತನ್ನ ಅರ್ಧದಷ್ಟು ಬಳಕೆದಾರರನ್ನು ಕೊಲ್ಲುತ್ತದೆ.

* ತಂಬಾಕು ಪ್ರತಿವರ್ಷ 80 ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತದೆ. ಆ ಸಾವುಗಳಲ್ಲಿ 70 ಲಕ್ಷಕ್ಕಿಂತಲೂ ಹೆಚ್ಚು ಜನ ನೇರ ತಂಬಾಕು ಸೇವನೆಯ ಪರಿಣಾಮದಿಂದ ಮತ್ತು ಸುಮಾರು 1.2 ಲಕ್ಷ ಧೂಮಪಾನಿಗಳು ಅಲ್ಲದವರು(ಎರಡನೇ ವ್ಯಕ್ತಿ) ಮೊದಲನೇ ವ್ಯಕ್ತಿ ಸೇದಿ ಬಿಟ್ಟ ಹೊಗೆಯನ್ನು ಸೇವಿಸುವ ಪರಿಣಾಮವಾಗಿ ಸಾವಿಗೀಡಾಗುತ್ತಾರೆ.

* ವಿಶ್ವದ 110 ಕೋಟಿ ಧೂಮಪಾನ ಮಾಡುವ ಜನರ ಪೈಕಿ ಶೇಕಡಾ 80ರಷ್ಟು ಜನ ಮಧ್ಯಮ ಆದಾಯದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

* ತಂಬಾಕು ಹೊಗೆಯಿಂದ ಬಟ್ಟೆ, ಚೀಲಗಳು, ಚರ್ಮ ಮತ್ತು ಕೂದಲಿಗೆ ಅಂಟಿಕೊಂಡಿರುವ ಹೊಗೆಯ ಶೇಷವು ಮೂರನೇ ವ್ಯಕ್ತಿಗೆ ತಗುಲುವ ಮೂಲಕ ಅಪಾಯವನ್ನು ತಂದೊಡ್ಡುತ್ತದೆ.

* ಮೂರನೇ ವ್ಯಕ್ತಿಗೆ ತಗುಲುವ ಶೇಷವು ಕ್ಯಾನ್ಸರ್‌ ಹೆಚ್ಚಿಸುವುದು ಸೇರಿದಂತೆ ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.