
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ.
ವಾಷಿಂಗ್ಟನ್ ಡಿ.ಸಿಯ ಕೆನಡಿ ಸೆಂಟರ್‌ನಲ್ಲಿ ಫಿಫಾ ಶಾಂತಿ ಪ್ರಶಸ್ತಿಯ ಡ್ರಾ ಪ್ರಕ್ರಿಯೆ ನಡೆದಿದ್ದು, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಟ್ರಂಪ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
‘ವಿಶ್ವದಾದ್ಯಂತ ಶಾಂತಿ ಮತ್ತು ಒಗ್ಗಟ್ಟನ್ನು ಉತ್ತೇಜಿಸುವಲ್ಲಿ ಟ್ರಂಪ್ ಅವರ ಕ್ರಮಗಳನ್ನು ಗುರುತಿಸಲಾಗಿದೆ. ಗಾಜಾದಲ್ಲಿ ಕದನ ವಿರಾಮ ಘೋಷಿಸುವಲ್ಲಿ ಅವರು (ಟ್ರಂಪ್) ಪ್ರಮುಖ ಪಾತ್ರವಹಿಸಿದ್ದಾರೆ. ಜನರ ಬಗ್ಗೆ ಕಾಳಜಿವಹಿಸಲು ಅವರಂತ ನಾಯಕರ ಅಗತ್ಯವಿದೆ’ ಎಂದು ಇನ್ಫಾಂಟಿನೊ ಬಣ್ಣಿಸಿದ್ದಾರೆ.
‘ಟ್ರಂಪ್ ಅವರು ವಿವಿಧ ದೇಶಗಳ ನಡುವೆ ಕದನ ವಿರಾಮ ಘೋಷಿಸಲು ಮಧ್ಯಸ್ಥಿಕೆ ವಹಿಸಿದ್ದಾರೆ ಮತ್ತು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡಿದ್ದಾರೆ’ ಎಂದೂ ಇನ್ಫಾಂಟಿನೊ ವಿವರಿಸಿದ್ದಾರೆ.
ವಿಶ್ವದಾದ್ಯಂತ ಜನರನ್ನು ಒಗ್ಗೂಡಿಸುವ ಮೂಲಕ ಶಾಂತಿಗಾಗಿ ಅಸಾಧಾರಣ ಮತ್ತು ವಿಶೇಷ ಕ್ರಮಗಳನ್ನು ಕೈಗೊಂಡ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಫಿಫಾ ಪ್ರಕಟಣೆಯಲ್ಲಿ ತಿಳಿಸಿದೆ.
‘ಇದು ನಿಜವಾಗಿಯೂ ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಳನ್ನು ಮೀರಿ, ಅತ್ಯಂತ ಮುಖ್ಯವಾದ ವಿಷಯವೆಂದರೆ ನಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇವೆ. ಇದಕ್ಕೆ ರವಾಂಡ–ಕಾಂಗೋ ಗಣರಾಜ್ಯ ಒಂದು ಉದಾಹರಣೆಯಾಗಿದೆ. 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಮತ್ತು ಅದು ಬೇಗನೆ ಮತ್ತೊಂದು 10 ಮಿಲಿಯನ್‌ಗೆ ತಲುಪುತ್ತಿತ್ತು. ನಾವು ಮಧ್ಯಪ್ರವೇಶಿಸಿ ಅದನ್ನು ನಿಲ್ಲಿಸಿದ್ದೇವೆ ಎಂಬುದು ನನಗೆ ತುಂಬಾ ಹೆಮ್ಮೆಯ ಸಂಗತಿ’ ಎಂದು ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.
‘ಭಾರತ-ಪಾಕಿಸ್ತಾನ ನಡುವಿನ ವಿಭಿನ್ನ ಸಂಘರ್ಷಗಳು ನಾನು ಕೊನೆಗೊಳಿಸಿದ್ದೇವೆ. ಅವುಗಳಲ್ಲಿ ಕೆಲವನ್ನು ಯುದ್ದ ಆರಂಭವಾಗುವ ಮೊದಲೇ ನಿಲ್ಲಿಸಿದ್ದೇನೆ’ ಎಂದೂ ಟ್ರಂಪ್ ಪುನರುಚ್ಚರಿಸಿದ್ದಾರೆ.
ಇದೇ ವೇಳೆ ಟ್ರಂಪ್ ಅವರಿಗೆ ಫಿಫಾ ಪ್ರಶಸ್ತಿಯನ್ನು ಘೋಷಿಸಿದ ಬಗೆಯೂ ಬಹಳಷ್ಟು ವಿಶೇಷವಾಗಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿಶ್ವದ ಪ್ರಮುಖ ನಾಯಕರನ್ನು ಹೈಲೈಟ್ ಮಾಡುವ ಫ್ರೀ ರೆಕಾರ್ಡ್ ಮಾಡಿದ ವಿಡಿಯೊ ಮಾಂಟೇಜ್ ಜೊತೆಗೆ ಟ್ರಂಪ್ ರಾಜತಾಂತ್ರಿಕತೆಯ ಬಗ್ಗೆ ಚರ್ಚಿಸುವ ತುಣುಕುಗಳನ್ನು ಪ್ರಸಾರ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.