
ದಾವೋಸ್: ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ತಮ್ಮ ನಿರ್ಧಾರಕ್ಕೆ ಬೆಂಬಲ ನೀಡದ ಯುರೋಪಿನ ಕೆಲವು ರಾಷ್ಟ್ರಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಒಡ್ಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುಧವಾರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಬಳಿಕ ಟ್ರಂಪ್, ಸುಂಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಗ್ರೀನ್‌ಲ್ಯಾಂಡ್ ಮತ್ತು ಆರ್ಕ್ಟಿಕ್ ಪ್ರದೇಶಕ್ಕೆ ಸಂಬಂಧಿಸಿದಂತೆ ಭವಿಷ್ಯದ ಒಪ್ಪಂದದ ಚೌಕಟ್ಟನ್ನು ರೂಪಿಸುವ ಕುರಿತು ಮಾರ್ಕ್ ರುಟ್ಟೆ ಅವರೊಂದಿಗೆ ಮಾತುಕತೆ ನಡೆಸಿದೆ. ಈ ಒಪ್ಪಂದ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ನ್ಯಾಟೊ ರಾಷ್ಟ್ರಗಳಿಗೆ ಉತ್ತಮ ಪರಿಹಾರವಾಗಲಿದೆ’ ಎಂದು ಹೇಳಿದ್ದಾರೆ.
ಕ್ಷಿಪಣಿ ರಕ್ಷಣಾ ವ್ಯವಸ್ಥೆ ‘ಗೋಲ್ಡನ್ ಡೋಮ್’ ಕುರಿತ ಮಾತುಕತೆ ಮುಂದುವರಿದಿದೆ ಎಂದಿರುವ ಅವರು, ಭದ್ರತೆ ಮತ್ತು ಖನಿಜದ ಬಗ್ಗೆಯೂ ಮಾತುಕತೆ ನಡೆದಿದೆ ಎಂದಿದ್ದಾರೆ.
ಏನತ್ಮಧ್ಯೆ, ಫಾಕ್ಸ್ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ ರುಟ್ಟೆ, ‘ಗ್ರೀನ್‌ಲ್ಯಾಂಡ್ ಮಾತ್ರವಲ್ಲದೇ ಇಡೀ ಆರ್ಕ್ಟಿಕ್ ಪ್ರದೇಶವನ್ನು ರಕ್ಷಿಸುವ ಟ್ರಂಪ್ ಅವರ ದೃಷ್ಟಿಕೋನವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಚರ್ಚಿಸಿದ್ದೇವೆ’ ಎಂದು ಹೇಳಿದ್ದಾರೆ. ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ವಶಕ್ಕೆ ಪಡೆಯುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
ಇನ್ನು, ಟ್ರಂಪ್ ಮತ್ತು ರುಟ್ಟೆ ಮಾತುಕತೆ ಫಲಪ್ರದವಾಗಿದೆ ಎಂದು ಹೇಳಿರುವ ನ್ಯಾಟೊ ವಕ್ತಾರೆ ಆಲಿಸನ್ ಹಾರ್ಟ್, ಹೊಸ ಒಪ್ಪಂದವು ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್‌ನಲ್ಲಿ ಆರ್ಥಿಕವಾಗಿ, ಸೇನಾಬಲದ ಮೂಲಕವಾಗಲಿ ಎಂದಿಗೂ ನೆಲೆಗೊಳ್ಳದಂತೆ ನೋಡಿಕೊಳ್ಳುವ ಗುರಿ ಹೊಂದಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.