ADVERTISEMENT

ಟ್ರಂಪ್‌ ಎರಡನೇ ಅವಧಿ ಶುರು: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಪಿಟಿಐ
Published 20 ಜನವರಿ 2025, 19:23 IST
Last Updated 20 ಜನವರಿ 2025, 19:23 IST
<div class="paragraphs"><p>&nbsp;ಜೆ.ಡಿ. ವೇನ್ಸ್‌,&nbsp;ಟ್ರಂಪ್‌ </p></div>

 ಜೆ.ಡಿ. ವೇನ್ಸ್‌, ಟ್ರಂಪ್‌

   

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರವಾಗಿರುವ ಅಮೆರಿಕದ ಚುಕ್ಕಾಣಿಯನ್ನು ಎರಡನೇ ಬಾರಿಗೆ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸಿದರು.

ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವು ಘೋಷಣೆಗಳನ್ನು ಮಾಡಿದರು.‘ಇಂದಿನಿಂದ ನಮ್ಮ ದೇಶವು ಬಲಿಷ್ಠವಾಗಲಿದೆಯಲ್ಲದೆ, ವಿಶ್ವದಾದ್ಯಂತ ತನ್ನ ಗೌರವವನ್ನು ಮರಳಿ ಪಡೆಯಲಿದೆ. ಪ್ರತಿ ರಾಷ್ಟ್ರವೂ ಅಸೂಯೆಪಡುವ ರೀತಿಯಲ್ಲಿ ನಾವು ಬೆಳವಣಿಗೆ ಸಾಧಿಸಲಿದ್ದೇವೆ’ ಎಂದು ಹೇಳಿದರು. 

ADVERTISEMENT

‘ಅಮೆರಿಕವು ಯಾರಿಗೂ ಮಣಿಯದು ಅಥವಾ ಹೆದರದು. ನಾವು ಎಂದಿಗೂ ವಿಫಲರಾಗುವುದಿಲ್ಲ. ಅಮೆರಿಕವು ಇಂದಿನಿಂದ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ. ಭವಿಷ್ಯವು ನಮ್ಮದಾಗಲಿದೆ’ ಎಂದು ಘೋಷಿಸಿದರು.

ಟ್ರಂಪ್‌ ಅವರು ದಕ್ಷಿಣದ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಸಾಮೂಹಿಕ ಗಡಿಪಾರು, ಮಹಿಳಾ ಕ್ರೀಡಾ ವಿಭಾಗದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ತಡೆ, ಇಂಧನ ಶೋಧಕ್ಕೆ ಹೇರಲಾಗಿರುವ ನಿರ್ಬಂಧ ಕೈಬಿಡುವುದು ಹಾಗೂ ಆಡಳಿತದಲ್ಲಿ ದಕ್ಷತೆ ಹೆಚ್ಚಳ ಸೇರಿದಂತೆ ಹಲವು ಕಾರ್ಯಕಾರಿ ಆದೇಶಗಳಿಗೆ ಸಹಿಹಾಕುವ ಸಾಧ್ಯತೆಯಿದೆ. ಅದರ ಸೂಚನೆಯನ್ನು ಅವರು ತಮ್ಮ ಭಾಷಣದಲ್ಲಿ ನೀಡಿದರು. 

‘ಮೊದಲು ನಮ್ಮ ದಕ್ಷಿಣದ ಗಡಿಯಲ್ಲಿ ನಾನು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತೇನೆ. ಅಮೆರಿಕಕ್ಕೆ ಎಲ್ಲ ರೀತಿಯ ಅಕ್ರಮ ಪ್ರವೇಶವನ್ನು ನಿಲ್ಲಿಸಲಾಗುವುದು. ನಮ್ಮ ದೇಶದಲ್ಲಿರುವ ಲಕ್ಷಾಂತರ ‘ಕ್ರಿಮಿನಲ್‌’ ವಿದೇಶಿಯರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸುತ್ತೇವೆ’ ಎಂದು ಹೇಳಿದರು. 

‘ನಮ್ಮ ದೇಶವನ್ನು ಅಕ್ರಮಿಸಲು ನಡೆಯುತ್ತಿರುವ ಪ್ರಯತ್ನವನ್ನು ತಡೆಯಲು ದಕ್ಷಿಣದ ಗಡಿಗೆ ಸೈನ್ಯವನ್ನು ಕಳುಹಿಸುತ್ತೇನೆ’ ಎಂದರು.

ಟ್ರಂಪ್‌ ಅವರಿಗೂ ಮುನ್ನ ಜೆ.ಡಿ. ವೇನ್ಸ್‌ ಅವರು ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್‌ ಅವರು ಪ್ರಮಾಣವಚನ ಬೋಧಿಸಿದರು. 

ಸಂಪ್ರದಾಯದ ಪ್ರಕಾರ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸಮಾರಂಭವು ‘ಕ್ಯಾಪಿಟಲ್‌’ನ ಮುಂಭಾಗದಲ್ಲಿ ನಡೆಯುತ್ತದೆ. ಆದರೆ ತೀವ್ರ ಚಳಿಯ ಕಾರಣ ಟ್ರಂಪ್‌ ಅವರ ಪ್ರಮಾಣವಚನ ಸಮಾರಂಭ ಒಳಾಂಗಣದಲ್ಲಿ ನೆರವೇರಿತು.

ಕಳೆದ ವರ್ಷ ನವೆಂಬರ್‌ 5ರಂದು ನಡೆದ ನಡೆದ ಚುನಾವಣೆಯಲ್ಲಿ 78 ವರ್ಷದ ಟ್ರಂಪ್‌ ಅವರು ಡೆಮಾಕ್ರಟಿಕ್ ಪಕ್ಷದ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧ ಅದ್ಭುತ ವಿಜಯ ಸಾಧಿಸಿದ್ದರು. ಟ್ರಂಪ್‌ ಅವರ ಈ ಗೆಲುವನ್ನು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪುನರಾಗಮನವೆಂದು ವಿಶ್ಲೇಷಿಸಲಾಗಿತ್ತು.

ವಿವಿಧ ದೇಶಗಳ ಗಣ್ಯರು ಭಾಗಿ:

ವಿಶ್ವದ ಹಲವು ದೇಶಗಳ ನಾಯಕರು ಮತ್ತು ಗಣ್ಯರು, ಟ್ರಂಪ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಪಾಲ್ಗೊಂಡರು. ಟ್ರಂಪ್‌ ಪತ್ನಿ ಮೆಲಾನಿಯಾ, ಪುತ್ರಿ ಇವಾಂಕಾ ಮತ್ತು ಅವರ ಪತಿ ಜರೆಡ್‌ ಕುಶ್ನರ್, ಉದ್ಯಮಿಗಳಾದ ಎಲಾನ್‌ ಮಸ್ಕ್‌, ಜೆಫ್‌ ಬೆಜೋಸ್‌ ಮತ್ತು ಟಿಮ್‌ ಕುಕ್
ಭಾಗವಹಿಸಿದ್ದರು.

ಅಮೆರಿಕದ ಸುವರ್ಣಯುಗ ಇದೀಗ ಪ್ರಾರಂಭವಾಗಿದೆ. ಅಮೆರಿಕವನ್ನು ಮತ್ತೆ ಜಗತ್ತಿನ ಶ್ರೇಷ್ಠ ರಾಷ್ಟ್ರವನ್ನಾಗಿಸಲು ದೇವರು ನನ್ನನ್ನು ಕಾಪಾಡಿದ್ದಾನೆ
ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ
ಎರಡೂ ದೇಶಗಳಿಗೆ ಅನುಕೂಲವಾಗುವಂತೆ ಮತ್ತು ಜಗತ್ತಿನ ಉತ್ತಮ ಭವಿಷ್ಯಕ್ಕಾಗಿ ಟ್ರಂಪ್‌ ಜತೆ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ
ನರೇಂದ್ರ ಮೋದಿ, ಪ್ರಧಾನಿ

ಟ್ರಂಪ್‌ ಭಾಷಣದ ಮುಖ್ಯಾಂಶಗಳು...

* ನಾನು ಹಲವು ಕಾರ್ಯಕಾರಿ ಅದೇಶಗಳಿಗೆ ಸಹಿ ಹಾಕುತ್ತೇನೆ. ಅದರೊಂದಿಗೆ ಅಮೆರಿಕದ ಸಂಪೂರ್ಣ ಪುನಃಸ್ಥಾಪನೆ ಪ್ರಕ್ರಿಯೆ ಶುರುವಾಗಲಿದೆ.

* ಒಬ್ಬ ಕಮಾಂಡರ್ ಇನ್ ಚೀಫ್ ಆಗಿದ್ದುಕೊಂಡು ನಮ್ಮ ದೇಶವನ್ನು ಬೆದರಿಕೆಗಳು ಮತ್ತು ಆಕ್ರಮಣಗಳಿಂದ ರಕ್ಷಿಸುವುದೇ ನನ್ನ ಮೊದಲ ಜವಾಬ್ದಾರಿ.

* ತಯಾರಿಕಾ ವಲಯದಲ್ಲಿ ಅಮೆರಿಕವು ಮತ್ತೆ ಮುಂಚೂಣಿಯ ರಾಷ್ಟ್ರವಾಗಲಿದೆ. ನಮ್ಮಲ್ಲೇ ಇನ್ನಷ್ಟು ಕಚ್ಚಾತೈಲ ಮತ್ತು ಅನಿಲ ಉತ್ಪಾದನೆಗೆ ಆದ್ಯತೆ ನೀಡುತ್ತೇವೆ

* 2017ರಲ್ಲಿ ಇದ್ದಂತೆಯೇ, ಜಗತ್ತು ಕಂಡ ಅತ್ಯಂತ ಬಲಿಷ್ಠ ಮಿಲಿಟರಿಯನ್ನು ನಾವು ಹೊಂದಲಿದ್ದೇವೆ.

* ಲಿಂಗ ಆಧಾರಿತ ನೀತಿಯನ್ನು ಕೊನೆಗೊಳಿಸಿ, ಆರ್ಹತೆ ಆಧಾರಿತ ಸಮಾಜವನ್ನು ನಿರ್ಮಿಸುತ್ತೇವೆ. 

‘ಪ್ಯಾರಿಸ್ ಒಪ್ಪಂದದಿಂದ ನಿರ್ಗಮನ’
ಪ್ಯಾರಿಸ್‌ ಹವಾಮಾನ ಒಡಂಬಡಿಕೆಯಿಂದ ಅಮೆರಿಕವು ಹೊರನಡೆಯಲಿದೆ ಎಂದು ಟ್ರಂಪ್‌ ಅವರ ಆಡಳಿತವು ಸೋಮವಾರ ಹೇಳಿದೆ. ‘ಅಧ್ಯಕ್ಷ ಟ್ರಂಪ್‌ ಅವರು ಪ್ಯಾರಿಸ್‌ ಒಪ್ಪಂದದಿಂದ ಹೊರನಡೆಯಲಿದ್ದಾರೆ’ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಆದರೆ ಯಾವಾಗ ಹೊರನಡೆಯಲಿದೆ ಎಂಬ ಬಗ್ಗೆ ಹೇಳಿಲ್ಲ. ಟ್ರಂಪ್‌ ಅವರ ಮೊದಲ ಅವಧಿಯ ಆಡಳಿತದಲ್ಲೂ ಅಮೆರಿಕವು ಈ ಒಪ್ಪಂದದಿಂದ ನಿರ್ಗಮಿಸಿತ್ತು. 2015ರ ಪ್ಯಾರಿಸ್‌ ಒಪ್ಪಂದದ ಪ್ರಕಾರ, ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುವ ಅಭಿವೃದ್ಧಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳಿಗೆ ಅಮೆರಿಕವೂ ಸೇರಿದಂತೆ ಎಲ್ಲಾ ಅಭಿವೃದ್ಧಿ ರಾಷ್ಟ್ರಗಳು ದೇಣಿಗೆ ನೀಡಲು ಒಪ್ಪಿಕೊಂಡಿದ್ದವು.
ಸುಂಕ ಹೆಚ್ಚಳಕ್ಕೆ ನಿರ್ಧಾರ
ವಿವಿಧ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ವಿಧಿಸಲಾಗುವ ಸುಂಕವನ್ನು ಹೆಚ್ಚಿಸಲಾಗುವುದು ಎಂದು ಟ್ರಂಪ್‌ ಘೋಷಿಸಿದರು. ‘ಅಮೆರಿಕದ ಕಾರ್ಮಿಕರು ಮತ್ತು ಇಲ್ಲಿನ ಜನರ ಹಿತಾಸಕ್ತಿ ಕಾಪಾಡಲು ನಮ್ಮ ವ್ಯಾಪಾರ ನೀತಿಯಲ್ಲಿ ಬದಲಾವಣೆಯನ್ನು ನಾನು ತಕ್ಷಣ ಪ್ರಾರಂಭಿಸುತ್ತೇನೆ’ ಎಂದರು. ‘ಇತರ ದೇಶಗಳನ್ನು ಶ್ರೀಮಂತಗೊಳಿಸಲು ನಮ್ಮ ನಾಗರಿಕರಿಗೆ ತೆರಿಗೆ ವಿಧಿಸುವ ಬದಲು, ನಮ್ಮ ನಾಗರಿಕರನ್ನು ಶ್ರೀಮಂತಗೊಳಿಸಲು ನಾವು ಇತರ ದೇಶಗಳಿಗೆ ಸುಂಕ ಮತ್ತು ತೆರಿಗೆ ವಿಧಿಸುತ್ತೇವೆ’ ಎಂದು ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.