ADVERTISEMENT

ಆಪರೇಷನ್ ಸಿಂಧೂರದಲ್ಲಿ ಪಾಕ್ ಪ್ರಧಾನಿ ಷರೀಫ್‌ರ ಬದುಕಿಸಿದ್ದೇ ಟ್ರಂಪ್‌ ಅಂತೆ!

ಏಜೆನ್ಸೀಸ್
Published 25 ಫೆಬ್ರುವರಿ 2026, 6:06 IST
Last Updated 25 ಫೆಬ್ರುವರಿ 2026, 6:06 IST
<div class="paragraphs"><p>ಪಾಕಿಸ್ತಾನ ಪ್ರಧಾನಿ&nbsp;ಶೆಹಬಾಜ್‌ ಶರೀಫ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್</p></div>

ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ’ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಪಾಕ್ ಪ್ರಧಾನಿ ಷರೀಫ್ ಬದುಕಿ ಉಳಿದದ್ದೇ ನನ್ನಿಂದ’ ಎಂದು ಹೇಳಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಮೊದಲ ‘ಸ್ಟೇಟ್ ಆಫ್ ಯೂನಿಯನ್’ ಭಾಷಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.

ADVERTISEMENT

‘ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವೇಳೆ ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಪಾಕ್‌ ಪ್ರಧಾನಿ ಶಹಬಾಜ್ ಶರೀಫ್ ಹತ್ಯೆಯಾಗಿರುತ್ತಿತ್ತು’ ಎಂದು ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

‘ಭಾರತ–ಪಾಕಿಸ್ತಾನ ಸೇರಿದಂತೆ ಜಾಗತಿಕವಾಗಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ನನ್ನ ಹಸ್ತಕ್ಷೇಪವಿಲ್ಲದಿದ್ದರೆ ಭಾರತ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಇತ್ತು. ಹೆಚ್ಚುವರಿ ಸುಂಕದ ಬೆದರಿಕೆ ಒಡ್ಡಿ ಭಾರತ- ಪಾಕ್ ಸೇನಾ ಸಂಘರ್ಷ ನಿಲ್ಲುವಂತೆ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

2025ರ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಿದ್ದಾಗಿ ಟ್ರಂಪ್ ಅವರು 85ಕ್ಕೂ ಅಧಿಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ಭಾರತ ಮೂರನೇ ವ್ಯಕ್ತಿಯ ಮಧ್ಯಪ್ರವೇಶವನ್ನು ನಿರಂತರವಾಗಿ ತಳ್ಳಿಹಾಕಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ವೇಳೆ 11 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ಈಚೆಗೆ ಹೇಳಿದ್ದರು.

2025ರ ಏ.22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರರು 26 ಮಂದಿ ಭಾರತೀಯರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಸಿಂಧೂರ’ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.

ನಾಲ್ಕು ದಿನ ನಿರಂತರವಾಗಿ ನಡೆದ ಡ್ರೋನ್‌ ಮತ್ತು ಕ್ಷಿಪಣಿ ದಾಳಿಗಳ ಬಳಿಕ ಭಾರತ– ಪಾಕಿಸ್ತಾನ ಸಂಘರ್ಷ ಕೊನೆಗಳಿಸಿ ಮೇ 10ರಂದು ಒಪ್ಪಂದ ಮಾಡಿಕೊಂಡವು. ಇದರಲ್ಲಿ ಮೂರನೇ ಯಾವ ವ್ಯಕ್ತಿಯೂ ಭಾಗಿಯಾಗಿಲ್ಲ ಎಂದು ಭಾರತ ಪದೇ ಪದೇ ಹೇಳುತ್ತಿದೆ. ಆದರೂ ಈ ಸಂಘರ್ಷವನ್ನು ಕೊನೆಗೊಳಿಸಿದ್ದು ತಾವೇ ಎಂದು ಡೊನಾಲ್ಡ್ ಟ್ರಂಪ್‌ ಹಲವು ಬಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.