ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
–ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರ್ಣಾಯಕ ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಸಂಸತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಟ್ರುತ್ ಸೋಷಿಯಲ್ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕ್ ಸರ್ಕಾರ ಶಿಫಾರಸು ಮಾಡಿದೆ.
‘ನಾನು ನಾಲ್ಕು ಅಥವಾ ಐದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬೇಕಿತ್ತು. ಆದರೆ, ಯಾರು ಕೂಡ ನನಗೆ ಪ್ರಶಸ್ತಿಯನ್ನು ನೀಡುವುದಿಲ್ಲ. ಏಕೆಂದರೆ ಅದನ್ನು ಉದಾರವಾದಿಗಳಿಗೆ ಮಾತ್ರ ನೀಡುತ್ತಾರೆ’ ಎಂದು ಟ್ರಂಪ್ ಹೇಳಿಕೊಂಡಿದ್ದರು.
‘ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಅಥವಾ ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳಲ್ಲಿ ಶಾಂತಿ ಮಾತುಕತೆ ಮೂಲಕ ಶಮನ ಮಾಡಿಕೊಳ್ಳಲು ಸಲಹೆ ನೀಡಿದ್ದೆ. ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರು.
ಕಾಂಗೊ ಮತ್ತು ರುವಾಂಡಾ ನಡುವಿನ ಸಂಘರ್ಷ ಸಂಬಂಧ ಎರಡು ದೇಶಗಳ ನಡುವೆ ಒಪ್ಪಂದವನ್ನು ಏರ್ಷಡಿಸಿದ್ದೇನೆ. ರುವಾಂಡಾ ಮತ್ತು ಕಾಂಗೊದ ಪ್ರತಿನಿಧಿಗಳು ಸೋಮವಾರ ವಾಷಿಂಗ್ಟನ್‌ಗೆ ಆಗಮಿಸಲಿದ್ದಾರೆ. ಒಪ್ಪಂದ ಸಂಬಂಧ ದಾಖಲೆಗಳಿಗೆ ಸಹಿ ಹಾಕಲಿದ್ದಾರೆ. ಈ ಮೂಲಕ ಆಫ್ರಿಕಾಕ್ಕೆ ಶ್ರೇಷ್ಠ ದಿನ ಮತ್ತು ಜಗತ್ತಿಗೂ ಉತ್ತಮ ದಿನವಾಗಲಿದೆ ಎಂದು ಟ್ರಂಪ್ ಹೇಳಿದ್ದರು.
ಇಂತಹ ಅನೇಕ ಸಂಘರ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಿ ಹೆಚ್ಚಿನ ರಕ್ತಪಾತವಾಗದಂತೆ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹಲವು ದೇಶಗಳಿಗೆ ಸಲಹೆ ನೀಡಿದ್ದೇನೆ. ಆದಾಗ್ಯೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದಿಲ್ಲ. ಆದರೆ, ಭೀಕರ ಯುದ್ಧಗಳು ನಡೆಯದಂತೆ ತಡೆಯುವಲ್ಲಿ ನನ್ನ ಪಾತ್ರವೇನು ಎಂಬುದು ಜನರಿಗೆ ತಿಳಿದಿದೆ. ಅಷ್ಟೇ ಸಾಕು ಎಂದಿದ್ದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.
ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್, ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
‘ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ತಡೆದಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು.
‘ಪರಸ್ಪರರ ವಿರುದ್ಧ ಗುಂಡು ಹಾರಿಸುತ್ತಿರುವ ದೇಶಗಳ ಜತೆಗೆ ಮತ್ತು ಸಂಭಾವ್ಯ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವವರ ಜತೆಗೆ ನಮ್ಮ ಆಡಳಿತವು ಯಾವುದೇ ವ್ಯಾಪಾರ ನಡೆಸುವುದಿಲ್ಲ’ ಎಂಬುದನ್ನು ಉಭಯ ದೇಶಗಳಿಗೆ ಮನದಟ್ಟು ಮಾಡಿದ್ದಾಗಿ ಅವರು ತಿಳಿಸಿದ್ದರು.
‘ಭಾರತ ಮತ್ತು ಪಾಕ್ ನಡುವಿನ ಹೋರಾಟವನ್ನು ನಾವು ನಿಲ್ಲಿಸಿದ್ದೇವೆ. ಇಲ್ಲದಿದ್ದರೆ ಇದು ಪರಮಾಣು ವಿಪತ್ತಾಗಿ ಬದಲಾಗುವ ಸಂಭವ ಇತ್ತು’ ಎಂದಿದ್ದರು.
‘ಭಾರತ ಮತ್ತು ಪಾಕಿಸ್ತಾನ ಮಹಾನ್ ನಾಯಕರನ್ನು ಹೊಂದಿವೆ. ಅವರು ಎಲ್ಲವನ್ನು ಅರ್ಥ ಮಾಡಿಕೊಂಡು, ಸೇನಾ ಸಂಘರ್ಷವನ್ನು ನಿಲ್ಲಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.