ವಾಷಿಂಗ್ಟನ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸುವುದು ತಮ್ಮ ಮುಂದಿನ ಗುರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಟ್ರಂಪ್, ‘ಈಗಾಗಲೇ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದು ಒಂಬತ್ತನೆಯದು. ಈ ಯುದ್ಧ ನಿಲ್ಲಿಸುವುದು ನನಗೆ ಕಷ್ಟವಲ್ಲ’ ಎಂದು ಹೇಳಿದ್ದಾರೆ.
‘ರುವಾಂಡಾ–ಕಾಂಗೊ, ಭಾರತ–ಪಾಕಿಸ್ತಾನ ಹೀಗೆ ನಾವು ಪರಿಹರಿಸಿದ ಎಲ್ಲಾ ಯುದ್ಧಗಳನ್ನು ನೋಡಿ... ಪ್ರತಿಯೊಂದು ಯುದ್ಧವನ್ನು ಪರಿಹರಿಸಿದಾಗಲೆಲ್ಲಾ ‘ನೀವು ಮುಂದಿನ ಯುದ್ಧವನ್ನು ನಿಲ್ಲಿಸಿದರೆ ನಿಮಗೆ ನೊಬೆಲ್ ಪ್ರಶಸ್ತಿ ಖಂಡಿತ’ ಎಂದು ಹೇಳುತ್ತಿದ್ದರು. ಆದರೆ ನನಗೆ ನೊಬೆಲ್ ಸಿಗಲಿಲ್ಲ. ಯಾರೋ ಅದನ್ನು ಪಡೆದರು. ಆದರೆ, ಪಡೆದಾಕೆ ತುಂಬಾ ಒಳ್ಳೆಯ ಮಹಿಳೆ. ಅವರ ಬಗ್ಗೆ ನನಗೆ ತಿಳಿದಿಲ್ಲ. ಆಕೆ ತುಂಬಾ ಉದಾರಿ. ಆ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ. ಜೀವಗಳನ್ನು ಉಳಿಸುವ ಬಗ್ಗೆ ಮಾತ್ರ ನಾನು ಕಾಳಜಿ ವಹಿಸುತ್ತೇನೆ. ಇದೀಗ ಒಂಬತ್ತೆನೆಯ ಯುದ್ಧಕ್ಕೆ(ಪಾಕ್–ಅಫ್ಗನ್) ಮಧ್ಯಸ್ಥಿಕೆ ವಹಿಸಬೇಕಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ನನಗೆ ತಿಳಿದ ಮಟ್ಟಿಗೆ ಅಧ್ಯಕ್ಷನೊಬ್ಬ ಒಂದೇ ಒಂದು ಯುದ್ಧ ನಿಲ್ಲಿಸಿದ ಉದಾಹರಣೆ ಇಲ್ಲ. ಬುಷ್ ಯುದ್ಧವನ್ನು ಪ್ರಾರಂಭಿಸಿದರು.....ಆದರೆ ನಾನು ಲಕ್ಷಗಟ್ಟಲೆ ಜೀವಗಳನ್ನು ಉಳಿಸಿದೆ. ನನ್ನಿಂದ ಸಾವಿರಾರು ಜೀವಗಳು ಉಳಿದಿವೆ ಎಂದು ಸ್ವತಃ ಪಾಕಿಸ್ತಾನ ಪ್ರಧಾನಿಯೇ ಹೇಳಿದ್ದಾರೆ. ಭಾರತ–ಪಾಕಿಸ್ತಾನ ಯುದ್ಧವನ್ನೇ ಉದಾಹರಣೆಯಾಗಿ ನೋಡಿ... ನಾನು ಮಧ್ಯಸ್ಥಿಕೆ ವಹಿಸದಿದ್ದರೆ ಅದು ಕೆಟ್ಟ ಅಂತ್ಯವನ್ನು ಕಾಣುತ್ತಿತ್ತು’ ಎಂದು ಹೇಳಿದ್ದಾರೆ.
‘ಪಾಕಿಸ್ತಾನ ಮತ್ತು ಅಫ್ಗನ್ ನಡುವೆ ಯುದ್ಧ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದನ್ನು ಪರಿಹರಿಸುವುದು ನನಗೆ ತುಂಬಾ ಸುಲಭ. ಅಧ್ಯಕ್ಷನಾಗಿ ನಾನು ಅಮೆರಿಕದ ಬಗ್ಗೆಯೂ ಗಮನ ಕೊಡಬೇಕು. ಆದರೆ, ಯುದ್ಧಗಳನ್ನು ನಿಲ್ಲಿಸುವುದು ನನಗೆ ತುಂಬಾ ಇಷ್ಟ. ಯಾಕೆ ಗೊತ್ತಾ? ಜನರು ಸಾಯುವುದನ್ನು ತಡೆಯಲು ನಾನು ಇಷ್ಟಪಡುತ್ತೇನೆ. ಈಗಾಗಲೇ ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.