ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಭಾರತ–ಪಾಕಿಸ್ತಾನ ಸೇರಿದಂತೆ ವಿಶ್ವದ ವಿವಿಧ ಸಂಘರ್ಷಗಳನ್ನು ಅಂತ್ಯಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಾದ ಮಂಡಿಸಿದ್ದಾರೆ.
ಮೇ 10ರಂದು ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ತಕ್ಷಣದಿಂದಲೇ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು ಎಂದು ಟ್ರಂಪ್ ಹಲವಾರು ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದರು.
ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ರೇಡಿಯೊ ಜಾಕಿ, ಲೇಖಕ ಚಾರ್ಲಮ್ಯಾಗ್ನೆ ಥಾ ಗಾಡ್ ಅವರನ್ನು ಟೀಕಿಸಿದ ಟ್ರಂಪ್, 'ನಾನೇನು ಮಾಡಿದ್ದೇನೆ ಎಂಬುದರ ಬಗ್ಗೆ ಅವರಿಗೆ ಗೊತ್ತಿಲ್ಲ. ರವಾಂಡ – ಕಾಂಗೋ ಗಣರಾಜ್ಯ ನಡುವಿನ 31 ವರ್ಷಗಳ ಸಂಘರ್ಷ ಸೇರಿದಂತೆ ಹಲವು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಭಾರತ-ಪಾಕಿಸ್ತಾನ ಅಥವಾ ಇರಾನ್‌ನ ಅಣ್ವಸ್ತ್ರ ಸಾಮರ್ಥ್ಯ ನಿರ್ನಾಮ ಮಾಡುವುದರ ಬಗ್ಗೆಯೂ ಅವರಿಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು 'ನ್ಯೂಸ್‌ಮ್ಯಾಕ್ಸ್'ಗೆ ನೀಡಿದ ಸಂದರ್ಶನದಲ್ಲೂ ಹಲವು ಯುದ್ಧಗಳನ್ನು ಅಂತ್ಯಗೊಳಿಸಿರುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದಾರೆ.
'ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ನಾನು ಯುದ್ಧವನ್ನು ಕೊನೆಗೊಳಿಸಿದ್ದೇನೆ. ನೀವು ಬೇಕಾದರೆ ಯುದ್ಧ ಮುಂದುವರಿಸಬಹುದು. ಆದರೆ ನಾನು ವ್ಯಾಪಾರವನ್ನು ನಿಲ್ಲಿಸುತ್ತೇನೆ. ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದಿದ್ದೆ. ತಿಂಗಳಿಗೆ ಸರಾಸರಿ ಒಂದು ಯುದ್ಧವನ್ನಾದರೂ ಅಂತ್ಯಗೊಳಿಸಿದ್ದೇನೆ. ಆ ಮೂಲಕ ಲಕ್ಷಾಂತರ ಪ್ರಾಣಗಳನ್ನು ಉಳಿಸಿದ್ದೇನೆ' ಎಂದೂ ಹೇಳಿಕೊಂಡಿದ್ದಾರೆ.
ಭಾರತ–ಪಾಕಿಸ್ತಾನ ಸೇರಿದಂತೆ ವಿಶ್ವದ ವಿವಿಧ ಸಂಘರ್ಷಗಳನ್ನು ಅಂತ್ಯಗೊಳಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಶ್ವೇತಭವನ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.