ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಚೀನಾದಿಂದ ಆಮದಾಗುವ ಸರಕುಗಳಿಗೆ ಫೆಬ್ರುವರಿ 1ರಿಂದ ಅನ್ವಯವಾಗುವಂತೆ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರಿಂದ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ.
ಅಮೆರಿಕದಲ್ಲಿ ಉಂಟಾದ ಫೆಂಟನಿಲ್ ಸಮಸ್ಯೆಗೆ ಚೀನಾವೇ ಕಾರಣ ಎಂದು ದೂರಿರುವ ಅವರು, ಇದಕ್ಕಾಗಿ ತೆರಿಗೆ ವಿಧಿಸಲಾಗುತ್ತಿದೆ ಎಂದಿದ್ದಾರೆ. ಚೀನಾವು ಕೆನಡಾ ಹಾಗೂ ಮೆಕ್ಸಿಕೊಗೆ ಫೆಂಟನಿಲ್ ಕಳಿಸಿ ಅಲ್ಲಿಂದ ಅಮೆರಿಕಕ್ಕೆ ಸಾಗಣೆಯಾಗುವಂತೆ ಮಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ತಮ್ಮ ಗಡಿ ಮೂಲಕ ಮೆಕ್ಸಿಕೊ ಹಾಗೂ ಕೆನಡಾ ಫೆಂಟನಿಲ್ ಹಾಗೂ ಅಕ್ರಮ ವಲಸಿಗರನ್ನು ಅಮೆರಿಕದ ಒಳಗೆ ಬರಲು ಸಹಕರಿಸುತ್ತಿದೆ ಎಂದು ಆರೋಪಿಸಿದ್ದ ಟ್ರಂಪ್, ಅಧಿಕಾರ ವಹಿಸಿಕೊಂಡ ಕೂಡಲೇ ಈ ಎರಡು ದೇಶಗಳ ಸರಕುಗಳ ಮೇಲೆ ಶೇ 25 ರಷ್ಟು ತೆರಿಗೆ ವಿಧಿಸಿ ಆದೇಶಿಸಿದ್ದರು.
‘ಮೆಕ್ಸಿಕೊ ಹಾಗೂ ಕೆನಡಾಗೆ ಫೆಂಟನಿಲ್ ಕಳಿಸುತ್ತಿರುವುದರಿಂದ ಚೀನಾ ಮೂಲದ ಸರಕುಗಳಿಗೆ ಶೇ 10 ತೆರಿಗೆ ವಿಧಿಸುತ್ತಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.
ತನ್ನ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್, ಚೀನಾ ಉತ್ಪನ್ನಗಳಿಗೆ $300 ಬಿಲಿಯನ್ ತೆರಿಗೆ ವಿಧಿಸಿದ್ದರು. ಜೋ ಬೈಡನ್ ಅದನ್ನು ಮುಂದುವರಿಸಿದ್ದರು. ಇದರ ಜೊತೆಗೆ ಬೈಡನ್ ಚೀನಾದ ಇ–ವಾಹನಗಳು, ಸೋಲಾರ್ ಸೆಲ್, ಸೆಮಿಕಂಡಕ್ಟರ್ ಹಾಗೂ ಸುಧಾರಿತ ಬ್ಯಾಟರಿಗಳ ಮೇಲೆ ತೆರಿಗೆ ಹೆಚ್ಚಿಸಿದ್ದರು. ಇದೀಗ ಹೆಚ್ಚುವರಿ ತೆರಿಗೆ ವಿಧಿಸಲು ಟ್ರಂಪ್ ಮುಂದಾಗಿದ್ದು, ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಟ್ರಂಪ್ ಅವರ ಈ ನಿರ್ಧಾರಕ್ಕೆ ಮೆಕ್ಸಿಕೊ, ಕೆನಡಾ ಹಾಗೂ ಚೀನಾ ಪ್ರತೀಕಾರದ ನಡೆ ಅನುಸರಿಸುವ ಸಾಧ್ಯತೆ ಇದ್ದು, ಜಾಗತಿಕ ವ್ಯಾಪಾರ ಯುದ್ಧಕ್ಕೆ ಇದು ಮುನ್ನುಡಿ ಬರೆಯಲಿದೆ ಎಂದು ಅರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಮೆರಿಕದ ಹಣದುಬ್ಬರ ಹೆಚ್ಚಳವಾಗಿ, ಆರ್ಥಿಕ ಪ್ರಗತಿ ಕುಂಠಿತವಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.