ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಆಮದು ಮಾಡಿಕೊಳ್ಳುವ ಮರ ಮತ್ತು ಮರದ ದಿಮ್ಮಿಗಳ ಮೇಲೆ ಶೇ 10ರಷ್ಟು, ಅಡುಗೆ ಮನೆ ಹಾಗೂ ಸ್ನಾನಗೃಹದ ಉಪಕರಣಗಳು, ಸೋಫಾಸೆಟ್ ಸೇರಿದಂತೆ ಪೀಠೋಪಕರಣಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ.
ಈ ನೂತನ ಸುಂಕಗಳು ಅಕ್ಟೋಬರ್ 14ರಿಂದ ಜಾರಿಗೆ ಬರಲಿವೆ. ಪೇಟೆಂಟ್ ಪಡೆದ ಔಷಧ ಮತ್ತು ಭಾರಿ ಟ್ರಕ್‌ಗಳ ಆಮದು ಮೇಲೆ ಹೊಸ ಸುಂಕಗಳನ್ನು ವಿಧಿಸಿ ಕಳೆದ ವಾರ ಆದೇಶಿಸಲಾಗಿತ್ತು. ಈ ಸುಂಕಗಳು ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿವೆ.
ಅಮೆರಿಕವು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಜನವರಿ 1ರ ಒಳಗಾಗಿ ಒಪ್ಪಂದ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, ಸೋಫಾ ಸೇರಿ ವಿವಿಧ ಪೀಠೋಪಕರಣಗಳ ಮೇಲಿನ ಸುಂಕವು ಶೇ 30ಕ್ಕೆ ಹೆಚ್ಚಿಸಲಾಗುವುದು ಹಾಗೂ ಅಡುಗೆ ಮನೆ ಉಪಕರಣಗಳ ಮೇಲಿನ ಸುಂಕವನ್ನು ಶೇ50ಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಮರದ ಉತ್ಪನ್ನಗಳ ಆಮದು ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ, ಈ ಉತ್ಪನ್ನಗಳ ಆಮದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಲಿದೆ ಎಂದು ಹೇಳುವ ಮೂಲಕ ಸುಂಕ ಹೆಚ್ಚಳವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.