ಮುಖ್ಯಾಂಶಗಳು
ವಿಶ್ವಸಂಸ್ಥೆ ಪ್ರಕಾರ ಕಳೆದ ವರ್ಷ ಏಡ್ಸ್‌ನಿಂದ 6.30 ಲಕ್ಷ ಸಾವು ಸಂಭವಿಸಿವೆ
ವಿಶ್ವದಲ್ಲಿ 40 ಲಕ್ಷಕ್ಕೂ ಹೆಚ್ಚು ಎಚ್‌ಐವಿ ಸೋಂಕಿತರಿದ್ದಾರೆ
ಸದ್ಯ ಕಾಂಡೋಮ್, ಮಾತ್ರೆಗಳು, ಕೈಬೋಟೆಗ್ರಾವಿರ್ ಲಸಿಕೆ ರಕ್ಷಣೆ ಇದೆ
ಲಂಡನ್: ಐರೋಪ್ಯ ಔಷಧಗಳ ನಿಯಂತ್ರಕ ಸಂಸ್ಥೆಯು ಎಚ್‌ಐವಿ ನಿಯಂತ್ರಿಸಬಲ್ಲ ವರ್ಷಕ್ಕೆ ಎರಡು ಬಾರಿ ನೀಡುವ ಲಸಿಕೆಯೊಂದನ್ನು ಶಿಫಾರಸು ಮಾಡಿದೆ. ಲಸಿಕೆಯು ಎಚ್‌ಐವಿ ಹರಡುವಿಕೆಗೆ ಅಂತ್ಯವಾಡಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಗಿಲಾಡ್ ಸೈನ್ಸಸ್ ಸಂಸ್ಥೆಯು ಯೂರೋಪ್‌ನಲ್ಲಿ ಲೆನಾಕಾಪವಿರ್ ಔಷಧಿಯ ಪರಿಮಾಣ ಮೌಲ್ಯಮಾಪನ ಮಾಡಿದ್ದು, ‘ಅತ್ಯಂತ ಪರಿಣಾಮಕಾರಿ’ ಮತ್ತು ‘ ಸಾರ್ವಜನಿಕ ಆರೋಗ್ಯದ ಹಿತಕ್ಕೆ ಅಗತ್ಯವಾಗಿದೆ’ ಎಂದು ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಐರೋಪ್ಯ ಆಯೋಗದಿಂದ ಔಷಧಿಗೆ ಒಪ್ಪಿಗೆ ದೊರೆತಿದ್ದು, ಐರೋಪ್ಯ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಮತ್ತು ಐಸ್‌ಲ್ಯಾಂಡ್, ನಾರ್ವೆ, ಲಿಕಟೆಸ್ಟಾಯಿನ್ ದೇಶಗಳಲ್ಲಿ ಮಾನ್ಯತೆ ಸಿಕ್ಕಿದೆ.
ಕಳೆದ ವರ್ಷ ಎಚ್‌ಐವಿ ಬಾಧಿತರಿಗೆ ಲೆನಾಕಾಪವಿರ್ ಲಸಿಕೆ ನೀಡಿದ್ದು ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಸೋಂಕಿನ ಹರಡುವಿಕೆ ನಿಯಂತ್ರಿಸುವಲ್ಲಿ ಶೇ 100ರಷ್ಟು ಪರಿಣಾಮ ತೋರಿಸಿದೆ ಎಂದು ಅಧ್ಯಯನ ತಿಳಿಸಿದೆ.
ವಿಶ್ವ ಸಂಸ್ಥೆಯ ಏಡ್ಸ್ ಏಜೆನ್ಸಿ ಕಾರ್ಯಕಾರಿ ನಿರ್ದೇಶಕ ವಿನ್ನೇ ಬ್ಯಾನ್ಯಿಮಾ ಅವರು ‘ಈ ಔಷಧಿ ಅಗತ್ಯ ಇದ್ದವರಿಗೆ ದೊರೆತಲ್ಲಿ ಎಚ್‌ಐವಿ ಸಾಂಕ್ರಾಮಿಕದ ಪಥವನ್ನೇ ಬದಲಿಸಲಿದೆ’ ಎಂದಿದ್ದಾರೆ.
ಜೂನ್‌ನಲ್ಲೇ ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತವ ಲೆನಾಕಾಪವಿರ್ ಅಧಿಕೃತ ಔಷಧಿ ಎಂದು ದೃಢೀಕರಿಸಿತ್ತು. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಈ ಔಷಧಿಯನ್ನು ಶಿಫಾರಸು ಮಾಡಿತ್ತು.
ಲೆನಾಕಾಪವಿರ್ ಸೋಂಕಿನಿಂದ ಆರು ತಿಂಗಳವರೆಗೆ ರಕ್ಷಣೆ ನೀಡಲಿದೆ. ಇದು ಈವರೆಗಿನ ಸುದೀರ್ಘ ರಕ್ಷಣೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆದರೆ ಇಡೀ ಜಗತ್ತಿನ ಎಚ್‌ಐವಿ ನಿಯಂತ್ರಣಕ್ಕೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಲೆನಾಕಾಪವಿರ್ ಲಭ್ಯತೆ ಕಷ್ಟಸಾಧ್ಯ ಎಂಬ ಟೀಕೆಯೂ ಇದೆ. ಔಷಧ ತಯಾರಕ ಸಂಸ್ಥೆ ಗಿಲಾಡ್ ಹೇಳುವಂತೆ ‘ಇದು ಅಗ್ಗದ, ಸಾಮಾನ್ಯ ಆವೃತ್ತಿಯ ಔಷಧಿಯಾಗಿದ್ದು, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಕೆರಿಬಿಯನ್‌ನ 120 ಬಡ ರಾಷ್ಟ್ರಗಳಿಗೆ ಪೂರೈಸಲು ಸಾಧ್ಯವಿದೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.