ADVERTISEMENT

ನೇಪಾಳ ಮಧ್ಯಂತರ ಸರ್ಕಾರಕ್ಕೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕರ್ಕಿ ಸಾರಥ್ಯ!

ಪಿಟಿಐ
Published 12 ಸೆಪ್ಟೆಂಬರ್ 2025, 7:01 IST
Last Updated 12 ಸೆಪ್ಟೆಂಬರ್ 2025, 7:01 IST
   

ಕಠ್ಮಂಡು: ನಿವೃತ್ತಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳ ಮಧ್ಯಂತರ ಸರ್ಕಾರ ಉಸ್ತುವಾರಿಯಾಗಿ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಈ ಸರ್ಕಾರವು, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲಿದ್ದು, ಹೊಸದಾಗಿ ಚುನಾವಣೆಗಳನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ವಿರುದ್ಧ 'ಜೆನ್‌ ಝೀ' ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆಯು ನೇಪಾಳ ಅಧ್ಯಕ್ಷ ಹಾಗೂ ಸೇನಾ ಪಡೆ ಮುಖ್ಯಸ್ಥ ರಾಮಚಂದ್ರ ಪೌಡೆಲ್‌ ಸೇರಿದಂತೆ ವಿವಿಧ ಪಾಲುದಾರರು ನಡೆಸಿದ ಮಾತುಕತೆಯ ಫಲವಾಗಿ ಗುರುವಾರ ಮಧ್ಯರಾತ್ರಿ ಅನಿರ್ದಿಷ್ಟಾವಧಿಗೆ ಕೊನೆಯಾಗಿದೆ.

ಆದಾಗ್ಯೂ, 'ಜೆನ್‌–ಝೀ' ಗುಂಪುಗಳು ನೂತನ ಪ್ರಧಾನಿ ಹುದ್ದೆಗೆ ಕರ್ಕಿ ಅವರ ಹೆಸರನ್ನು ಪ್ರಸ್ತಾಪಿಸಿವೆ. ಹಾಗಾಗಿ, ಅಧ್ಯಕ್ಷ ಪೌಡೆಲ್‌ ಅವರು ಕರ್ಕಿ ಅವರನ್ನು ನೇಪಾಳದ ಮೊದಲ ಮಹಿಳಾ ಪ್ರಧಾನಿಯನ್ನಾಗಿ ಶುಕ್ರವಾರ ನೇಮಕ ಮಾಡಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ADVERTISEMENT

ಪ್ರಸ್ತುತ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪೌಡೆಲ್‌ ಅವರು ವಿವಿಧ ಪಕ್ಷಗಳ ರಾಜಕೀಯ ನಾಯಕರು ಮತ್ತು ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಅಧ್ಯಕ್ಷರ ಆಪ್ತ ವಲಯದಿಂದ ಬಂದಿದೆ.

ಪ್ರತಿಭಟನಾನಿರತರು ಸಾಂವಿಧಾನಿಕ ಚೌಕಟ್ಟಿಲ್ಲಿಯೇ ಪರಿಹಾರ ಕಂಡುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಹಾಗಾಗಿ, ಸದ್ಯದ ಸಂಸತ್‌ ಅನ್ನು ವಿಸರ್ಜಿಸುವುದು ಅಥವಾ ಅದನ್ನೇ ಮುಂದುವರಿಸುವ ಆಯ್ಕೆಗಳನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ.

ಏತನ್ಮಧ್ಯೆ, ರಾತ್ರಿಯಿಡೀ ಹೇರಲಾಗಿದ್ದ ಕರ್ಫ್ಯೂ ಅನ್ನು ಸಡಿಲಿಸಲಾಗಿದೆ. ದೈನಂದಿನ ವ್ಯವಹಾರಗಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ 7ರಿಂದ 11ರವರೆಗೆ ಸಮಯಾವಕಾಶ ನೀಡಲಾಗಿದೆ. ನಂತರ, ಸಂಜೆ 5ರ ವರೆಗೆ ರಾಷ್ಟ್ರದಾದ್ಯಂತ ನಿರ್ಬಂಧ ಕ್ರಮಗಳು ಜಾರಿಯಲ್ಲಿರಲಿದೆ.

ಭ್ರಷ್ಟಾಚಾರ ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಕೆ.ಪಿ. ಶರ್ಮಾ ಓಲಿ ಅವರು ಪ್ರಧಾನಿ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಓಲಿ ರಾಜೀನಾಮೆಯನ್ನು ಅಂಗೀಕರಿಸಿರುವ ಪೌಡೆಲ್‌, ಹೊಸ ಸಚಿವ ಸಂಪುಟ ರಚನೆಯಾಗುವವರೆಗೆ ಸರ್ಕಾರ ಮುಂದುವರಿಯಲಿದೆ ಎಂದು ಹೇಳಿದ್ದರು.

ದೇಶದಾದ್ಯಂತ ನಡೆದ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.