ADVERTISEMENT

ಅಮೆರಿಕದ ಇಂಧನ ಕಂಪನಿಗಳ ಮೇಲೆ ರಷ್ಯಾದ ಹ್ಯಾಕರ್‌ಗಳ ಕಣ್ಣು: ಎಫ್‌ಬಿಐ ಎಚ್ಚರಿಕೆ

ಏಜೆನ್ಸೀಸ್
Published 23 ಮಾರ್ಚ್ 2022, 2:58 IST
Last Updated 23 ಮಾರ್ಚ್ 2022, 2:58 IST
ಹ್ಯಾಕಿಂಗ್‌–ಪ್ರಾತಿನಿಧಿಕ ಚಿತ್ರ
ಹ್ಯಾಕಿಂಗ್‌–ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭವಾದ ನಂತರದಲ್ಲಿ ಇಂಧನ ಕಂಪನಿಗಳ ಮೇಲೆ ರಷ್ಯಾದ ಹ್ಯಾಕರ್‌ಗಳು ಕಣ್ಣಿಟ್ಟಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆ ಎಫ್‌ಬಿಐ ಎಚ್ಚರಿಕೆ ನೀಡಿದೆ.

'ರಷ್ಯಾದ ಹ್ಯಾಕರ್‌ಗಳು ಇದುವರೆಗೂ ಇಂಧನ ವಲಯದ ಐದು ಕಂಪನಿಗಳ ಡಿಜಿಟಲ್‌ ಮಾಹಿತಿಯನ್ನು ತಡಕಾಡಿದ್ದು, ಹಾನಿಗೊಳಿಸುವ ಸಾಧ್ಯತೆಯ ಹುಡುಕಾಟ ನಡೆಸಿದ್ದಾರೆ. ಅದರೊಂದಿಗೆ ರಕ್ಷಣಾ ಕೈಗಾರಿಕೆ ಮತ್ತು ಹಣಕಾಸು ಸೇವಾ ವಲಯದ ಕನಿಷ್ಠ 18 ಕಂಪನಿಗಳ ಮೇಲೆ ಹ್ಯಾಕರ್‌ಗಳ ದೃಷ್ಟಿ ಬಿದ್ದಿದೆ' ಎಂದು ಎಫ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಕಂಪನಿಗಳ ಹೆಸರು ಮತ್ತು ಸೈಬರ್‌ ದಾಳಿಯ ಯೋಜನೆಯ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ.

ಕಂಪನಿ ವೆಬ್‌ಸೈಟ್‌ಗಳು, ನೆಟ್‌ವರ್ಕ್‌ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಅಲ್ಲಿರುವ ನ್ಯೂನತೆ ಅಥವಾ ಹಾನಿ ಮಾಡುವ ಸಾಧ್ಯತೆಯ ಹುಡುಕಾಟ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಅದು ಸೈಬರ್‌ ದಾಳಿಯ ಮುನ್ಸೂಚನೆ ಎಂದೇ ಪರಿಗಣಿಸಲಾಗದು. ಹಾಗಿದ್ದರೂ, ಎಫ್‌ಬಿಐ ಎಚ್ಚರಿಕೆ ರವಾನಿಸಿದೆ.

ADVERTISEMENT

ಅಮೆರಿಕದ ಪ್ರಮುಖ ಸಂಸ್ಥೆಗಳ ಮೇಲೆ ರಷ್ಯಾ ಸೈಬರ್‌ ದಾಳಿ ನಡೆಸುವ ಕುರಿತು ಸೂಚನೆ ದೊರೆತಿರುವುದಾಗಿ ಸೋಮವಾರ ಶ್ವೇತ ಭವನದ ಪ್ರಕಟಣೆಯು ತಿಳಿಸಿತ್ತು. ಸಾಫ್ಟ್‌ವೇರ್‌ಗಳಲ್ಲಿ ದೋಷಗಳು ಇರುವುದು ತಿಳಿದಿದ್ದರೂ ಅವುಗಳನ್ನು ಸರಿಪಡಿಸಲು ಸಂಸ್ಥೆಗಳು ವಿಫಲಗೊಂಡಿರುವುದನ್ನು ಶ್ವೇತ ಭವನ ಉಲ್ಲೇಖಿಸಿದ್ದು, ಅದನ್ನೇ ರಷ್ಯಾದ ಹ್ಯಾಕರ್‌ಗಳು ಉಪಯೋಗಿಸಿಕೊಳ್ಳಬಹುದು ಎಂದಿದೆ.

ಅಮೆರಿಕ ಸರ್ಕಾರದ ಸೈಬರ್‌ಸೆಕ್ಯುರಿಟಿ ಸಂಸ್ಥೆಯು ಸೈಬರ್‌ ದಾಳಿಗಳ ಸಾಧ್ಯತೆಯ ಬಗ್ಗೆ ಉದ್ಯಮ ವಲಯದ 13,000 ಜನರಿಗೆ ಎಚ್ಚರಿಕೆ ನೀಡಿದೆ.

2021ರ ಮಾರ್ಚ್‌ನಿಂದ ಸ್ಕ್ಯಾನಿಂಗ್‌ಗೆ ಒಳಪಟ್ಟಿರುವ 140 ಇಂಟರ್‌ನೆಟ್‌ ಪ್ರೊಟೊಕಾಲ್‌ (ಐಪಿ) ಅಡ್ರೆಸ್‌ಗಳು ಅಮೆರಿಕದ ಪ್ರಮುಖ ಸಂಸ್ಥೆಗಳಿಗೆ ಸಂಬಂಧಿಸಿರುವುದನ್ನು ಎಫ್‌ಬಿಐ ಹಂಚಿಕೊಂಡಿದೆ. ಕಳೆದ ತಿಂಗಳು ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಶುರು ಮಾಡಿದ ನಂತರದಲ್ಲಿ ಸ್ಕ್ಯಾನಿಂಗ್‌ ಪ್ರಕ್ರಿಯೆಯು ಹೆಚ್ಚಿರುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.