ADVERTISEMENT

ಕೊರೊನಾ ವೈರಸ್ ಭೀತಿ: ಬೀಜಿಂಗ್‌, ಶಾಂಘೈ ಸೇರಿ ಚೀನಾ ನಗರಗಳಲ್ಲಿ ನೀರವ ಮೌನ

ಬಿಕೋ ಎನ್ನುತ್ತಿವೆ ಪ್ರವಾಸಿ ಕೇಂದ್ರಗಳು * ಚೀನಾದಿಂದ ಅಂತರ ಕಾಯ್ದುಕೊಳ್ಳುತ್ತಿರುವ ನೆರೆ ರಾಷ್ಟ್ರಗಳು

ರಾಯಿಟರ್ಸ್
Published 10 ಫೆಬ್ರುವರಿ 2020, 3:38 IST
Last Updated 10 ಫೆಬ್ರುವರಿ 2020, 3:38 IST
ಶಾಂಘೈನ ಓರಿಯೆಂಟಲ್ ಪರ್ಲ್‌ ಟವರ್ ಆವರಣ ಬಿಕೋ ಎನ್ನುತ್ತಿರುವುದು. ಪ್ರತಿ ದಿನ ನೂರಾರು ಜನರಿರುವ ಈ ಪ್ರದೇಶದಲ್ಲೀಗ ಪೊಲೀಸ್ ಅಧಿಕಾರಿಯೊಬ್ಬರು ಮುಖಗವಸು ಧರಿಸಿ ಓಡಾಡುತ್ತಿರುವುದು ಬಿಟ್ಟರೆ ಜನರೇ ಕಾಣಿಸುತ್ತಿಲ್ಲ –ರಾಯಿಟರ್ಸ್ ಚಿತ್ರ
ಶಾಂಘೈನ ಓರಿಯೆಂಟಲ್ ಪರ್ಲ್‌ ಟವರ್ ಆವರಣ ಬಿಕೋ ಎನ್ನುತ್ತಿರುವುದು. ಪ್ರತಿ ದಿನ ನೂರಾರು ಜನರಿರುವ ಈ ಪ್ರದೇಶದಲ್ಲೀಗ ಪೊಲೀಸ್ ಅಧಿಕಾರಿಯೊಬ್ಬರು ಮುಖಗವಸು ಧರಿಸಿ ಓಡಾಡುತ್ತಿರುವುದು ಬಿಟ್ಟರೆ ಜನರೇ ಕಾಣಿಸುತ್ತಿಲ್ಲ –ರಾಯಿಟರ್ಸ್ ಚಿತ್ರ   
""

ಬೀಜಿಂಗ್:ಅದು ಚೀನಾದ ರಾಜಧಾನಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಅಂದಾಜು 2.15 ಕೋಟಿ ಜನರಿರುವ ಬೀಜಿಂಗ್‌ ನಗರದ ಜಿಂಗ್ಶನ್‌ ಪಾರ್ಕ್‌ಗೆ ಪ್ರತಿ ದಿನ ಏನಿಲ್ಲವೆಂದರೂ ಸಾವಿರಾರು ಜನ ಭೇಟಿ ನೀಡುತ್ತಾರೆ.ಆದರೆ, ಅಂತಹ ಪ್ರದೇಶದಲ್ಲೀಗ ನೀರವ ಮೌನ.ಹಕ್ಕಿಗಳ ಚಿಲಿಪಿಲಿ ಸದ್ದು ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಕೊರೊನಾ ವೈರಸ್‌ ಸೋಂಕಿನ ಭೀತಿಯ ಪರಿಣಾಮ ಇಡೀ ಬೀಜಿಂಗ್ ನಗರವೇ ಬಿಕೋ ಎನ್ನುತ್ತಿದೆ. ಜನ ಮನೆ ಬಿಟ್ಟು ಹೊರಬರುತ್ತಿಲ್ಲ.

‘ಯಾರೂ ಮನೆ ಬಿಟ್ಟು ಹೊರಬರುವ ಧೈರ್ಯ ಮಾಡುತ್ತಿಲ್ಲ. ಕೆಲವೇ ಕೆಲವರು ಮಾತ್ರ ಇಲ್ಲಿಗೆ ಬರುತ್ತಾರಷ್ಟೆ. ಸಾಮಾನ್ಯವಾಗಿ ಬರುವ ಪ್ರವಾಸಿಗರ ಮೂರನೇ ಒಂದರಷ್ಟು ಮಂದಿಯಷ್ಟೇ ಈಗ ಭೇಟಿ ನೀಡುತ್ತಿದ್ದಾರೆ’ ಎನ್ನುತ್ತಾರೆಜಿಂಗ್ಶನ್‌ ಪಾರ್ಕ್‌ನ ಭದ್ರತಾ ಸಿಬ್ಬಂದಿಯೊಬ್ಬರು.

ಪ್ರತಿ ವರ್ಷ ರಜಾ ಕಾಲದಲ್ಲಿ ವಾಂಗ್‌ಫುಜಿಂಗ್‌ ಶಾಪಿಂಗ್ ಪ್ರದೇಶದಲ್ಲಿ ಸದಾ ಜನಜಂಗುಳಿ ಇರುತ್ತದೆ. ಆದರೆ ಈಗ ಭದ್ರತಾ ಸಿಬ್ಬಂದಿ ಮತ್ತು ರಸ್ತೆ ಶುಚಿಗೊಳಿಸುವ ಕಾರ್ಮಿಕರು ಬಿಟ್ಟರೆ ಗ್ರಾಹಕರು ಕಾಣಿಸುತ್ತಲೇ ಇಲ್ಲ.

ADVERTISEMENT

ಇದು ಕೇವಲ ಬೀಜಿಂಗ್ ನಗರವೊಂದರ ಕಥೆಯಲ್ಲ. ಚೀನಾದ ಹಣಕಾಸು ಹಬ್‌ ಎಂದೇ ಪರಿಗಣಿಸಲ್ಪಟ್ಟಿರುವ ಶಾಂಘೈಯಲ್ಲಿಯೂ ಜನ ರಸ್ತೆಗಿಳಿಯುತ್ತಿಲ್ಲ. ಪ್ರಮುಖ ನಗರಗಳಲ್ಲಿ ರಜೆ ಘೋಷಿಸಿರುವ ಸರ್ಕಾರ ಮನೆಯಿಂದ ಹೊರಬಾರದಂತೆ ಜನರಿಗೆ ಸೂಚನೆ ನೀಡಿದೆ.

ಹ್ಯುಬೆ ಪ್ರಾಂತ್ಯದ ವುಹಾನ್‌ನಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕಿನಿಂದ ಈವರೆಗೆ ಚೀನಾದಲ್ಲಿ ಸುಮಾರು 811 ಜನ ಮೃತಪಟ್ಟಿದ್ದಾರೆ.37,198ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀಜಿಂಗ್‌ನಲ್ಲಿರುವ ಪೀಪಲ್ಸ್‌ ಬ್ಯಾಂಕ್‌ ಆಫ್ ಚೀನಾ ಕಚೇರಿ ಮುಂಭಾಗ –ರಾಯಿಟರ್ಸ್ ಚಿತ್ರ

ಚೀನಾದಿಂದ ದೂರ... ದೂರ...:ಚೀನಾದಲ್ಲಿ ಮಾರಕ ಕೊರೊನಾ ವೈರಸ್ ಹರಡಲು ಆರಂಭವಾದ ಕೂಡಲೇ ಭಾರತ, ತೈವಾನ್, ಬೆಲ್ಜಿಯಂ, ಥಾಯ್ಲೆಂಡ್‌, ಕೆನಡಾ, ಅಮೆರಿಕ ಸೇರಿದಂತೆ ಹಲವು ದೇಶಗಳು ಚೀನಾದಲ್ಲಿರುವ ತಮ್ಮ ಜನರನ್ನು ವಾಪಸ್ ಕರೆಸಿಕೊಂಡಿವೆ. ಇದೀಗ ಆ ದೇಶದಿಂದ ಜನರನ್ನು ಕರೆದುಕೊಂಡು ಹೋಗಲೂ ಇತರ ರಾಷ್ಟ್ರಗಳು ಹಿಂದೇಟು ಹಾಕುತ್ತಿರುವುದು ವರದಿಯಾಗುತ್ತಿದೆ.

ಚೀನಾದೊಂದಿಗಿನ ಗಡಿಯನ್ನೇ ಹಾಂಗ್‌ಕಾಂಗ್ ಬಂದ್ ಮಾಡಿದೆ. ಚೀನಾ ಪ್ರಜೆಗಳಿದ್ದ ಕಾರಣಕ್ಕೆ ಪ್ರವಾಸಿ ಹಡಗೊಂದರಲ್ಲಿದ್ದ ಸಾವಿರಾರು ಜನರಿಗೆ ತನ್ನ ನೆಲದಲ್ಲಿ ಇಳಿಯಲುಹಾಂಗ್‌ಕಾಂಗ್ ಅವಕಾಶವನ್ನೇ ನಿಡದ ವಿಚಾರವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ‘ದಿ ವಲ್ಡ್‌ ಡ್ರೀಮ್‌’ ಹೆಸರಿನ ಈ ಹಡಗಿನಲ್ಲಿ ಮೂವರು ಚೀನಾ ಪ್ರಜೆಗಳು ವಿಯೆಟ್ನಾಂಗೆ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ, ಹಡಗು ಹಾಂಗ್‌ಕಾಂಗ್‌ ಪ್ರವೇಶಿಸುತ್ತಿದ್ದಂತೆಯೇ ಅದನ್ನು ಸರ್ಕಾರ ತಡೆದಿತ್ತು. ಕೊನೆಯದಾಗಿ, ಸೋಂಕಿನ ಭೀತಿಯಿಂದ ಐದು ದಿನಗಳಿಂದ ಹಡಗಿನಲ್ಲೇ ಬಂಧಿಯಾಗಿದ್ದ 1,800ಕ್ಕೂ ಅಧಿಕ ಸಿಬ್ಬಂದಿ ಹಾಗೂ ಅಷ್ಟೇ ಸಂಖ್ಯೆಯ ಪ್ರವಾಸಿಗರಿಗೆ ಹಡಗಿನಿಂದ ಇಳಿಯಲು ಭಾನುವಾರ ಅನುಮತಿ ನೀಡಲಾಗಿದೆ.

ಬಾಂಗ್ಲಾದೇಶಿಯರನ್ನು ಕರೆತರಲು ಚೀನಾಗೆ ತೆರಳಲು ವಿಮಾನ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಬಾಂಗ್ಲಾದೇಶ ಸರ್ಕಾರ ಭಾನುವಾರ ಹೇಳಿತ್ತು. ಇದರಿಂದಾಗಿ 171 ಬಾಂಗ್ಲಾದೇಶಿಯರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೊನಾ ವೈರಸ್‌ಗೆ ಸಂಬಂಧಿಸಿ ಅಮೆರಿಕ ಭೀತಿ ಹರಡುತ್ತಿದೆಎಂದು ಕೆಲವು ದಿನಗಳ ಹಿಂದೆ ಚೀನಾ ರೋಪಿಸಿತ್ತು. ಅಮೆರಿಕವು ಹೀಗೆ ಮಾಡುವುದರಿಂದ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದೂ ಚೀನಾ ಎಚ್ಚರಿಕೆ ನೀಡಿತ್ತು. ಕೊರೊನಾ ವೈರಸ್ ಹರಡಲು ಆರಂಭವಾದ ದಿನಗಳಲ್ಲಿ ಚೀನಾದಲ್ಲಿರುವ ರಾಯಭಾರ ಕಚೇರಿ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಲು ಅಮೆರಿಕ ನಿರ್ಧರಿಸಿತ್ತು. ಚೀನಾ ಪ್ರವಾಸಿಗರ ಮೇಲೆ ನಿಷೇಧವನ್ನೂ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.