ಗಾಜಾ: ಕದನ ವಿರಾಮಕ್ಕೆ ಸಂಬಂಧಿಸಿದ ಹೊಸ ಪ್ರಸ್ತಾವದ ಕುರಿತು ಶೀಘ್ರದಲ್ಲೇ ಮಾತುಕತೆ ಆರಂಭಿಸಲು ತಾವು ಸಿದ್ಧ ಎಂದು ಹಮಾಸ್ ಬಂಡುಕೋರ ಸಂಘಟನೆ ಶನಿವಾರ ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನ ಈ ಹೇಳಿಕೆ ಹೊರಬಿದ್ದಿದೆ. ಪ್ಯಾಲೆಸ್ಟೀನ್‌ನ ಇತರ ಬಣಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಹಮಾಸ್ ತನ್ನ ನಿರ್ಧಾರ ಪ್ರಕಟಿಸಿದೆ.
‘ಅಮೆರಿಕವು ಮುಂದಿಟ್ಟಿರುವ ಕದನ ವಿರಾಮ ಪ್ರಸ್ತಾವವನ್ನು ಮಧ್ಯಸ್ಥಗಾರರ ಮೂಲಕ ಸ್ವೀಕರಿಸಿದ್ದು, ಅದನ್ನು ಜಾರಿಗೊಳಿಸುವ ಕಾರ್ಯವಿಧಾನದ ಕುರಿತು ಮಾತುಕತೆಯಲ್ಲಿ ತೊಡಗಿಕೊಳ್ಳಲು ಸಿದ್ಧರಿದ್ದೇವೆ’ ಎಂದು ಹಮಾಸ್ ಪ್ರಕಟಣೆ ತಿಳಿಸಿದೆ.
ಹಮಾಸ್‌ಗೆ ಬೆಂಬಲ ನೀಡುವ ಇಸ್ಲಾಮಿಕ್ ಜಿಹಾದ್ ಸಂಘಟನೆ ಕದನ ವಿರಾಮ ಮಾತುಕತೆಯನ್ನು ಬೆಂಬಲಿಸುವುದಾಗಿ ತಿಳಿಸಿದೆ. ಆದರೆ, ಗಾಜಾದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಬಳಿಕ ಇಸ್ರೇಲ್ ಯಾವುದೇ ದಾಳಿ ನಡೆಸುವುದಿಲ್ಲ ಎಂಬುದು ‘ಖಾತರಿಯಾಗಬೇಕು’ ಎಂದು ಒತ್ತಾಯಿಸಿದೆ.
20 ಸಾವು:
ಗಾಜಾದ ವಿವಿಧ ಭಾಗಗಳಲ್ಲಿ ಇಸ್ರೇಲ್ ಸೇನೆ ಶನಿವಾರ ನಡೆಸಿದ ದಾಳಿಯಲ್ಲಿ 20 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿರುವುದಾಗಿ ಗಾಜಾದ ನಾಗರಿಕ ರಕ್ಷಣೆ ವಿಭಾಗದ ವಕ್ತಾರ ಮಹಮೂದ್ ಬಾಸಲ್ ಹೇಳಿದ್ದಾರೆ. ಗಾಜಾ ನಗರದ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.