ADVERTISEMENT

ಗ್ರೆಟಾ ಹೇಳಿಕೆ | ಭಾರತ-ಸ್ವೀಡನ್ ಬಾಂಧವ್ಯಕ್ಕೆ ಧಕ್ಕೆಯಿಲ್ಲ: ವಿದೇಶಾಂಗ ಸಚಿವಾಲಯ

ಪಿಟಿಐ
Published 6 ಮಾರ್ಚ್ 2021, 1:16 IST
Last Updated 6 ಮಾರ್ಚ್ 2021, 1:16 IST
ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್
ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್   

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸ್ವೀಡನ್‌ನ ಅಂತರ ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ನೀಡಿರುವ ಹೇಳಿಕೆಗಳು ಭಾರತ ಹಾಗೂ ಸ್ವೀಡನ್ ನಡುವಣ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯನ್ನುಂಟುಮಾಡುವುದಿಲ್ಲಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಅಲ್ಲದೆ ಶುಕ್ರವಾರ ಭಾರತ ಹಾಗೂ ಸ್ವೀಡನ್ ಪ್ರಧಾನಿ ಮಂತ್ರಿಗಳ ನಡುವಣ ಸಭೆಯಲ್ಲಿ ಗ್ರೆಟಾ ಥನ್‌ಬರ್ಗ್ ವಿಷಯ ಪ್ರಸ್ತಾಪವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಭಾರತದಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗ್ರೆಟಾ ಥನ್‌ಬರ್ನ್ ವಿಷಯವನ್ನು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್, ಇಲ್ಲ ಎಂದು ಉತ್ತರಿಸಿದರು. ಇದು ಭಾರತ-ಸ್ವೀಡನ್ ನಡುವಣ ದ್ವಿಪಕ್ಷೀಯ ಸಮಸ್ಯೆಯಲ್ಲ ಎಂದು ಹೇಳಿದರು.

ADVERTISEMENT

ಕಳೆದ ತಿಂಗಳು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದ ಗ್ರೆಟಾ ಥನ್‌ಬರ್ನ್ ಈ ಸಂಬಂಧ ಟ್ವೀಟ್‌ಗಳನ್ನು ಮಾಡಿದ್ದರು. ಅಲ್ಲದೆ ಅವರು ಹಂಚಿರುವ 'ಟೂಲ್‌ಕಿಟ್' ವಿವಾದಕ್ಕೀಡಾಗಿತ್ತು.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಾಪ್ ತಾರೆ ರಿಹಾನ್ನಾ ಸೇರಿದಂತೆ ಹಲವಾರು ಅಂತರ ರಾಷ್ಟ್ರೀಯ ಗಣ್ಯರು ಟ್ವೀಟ್ ಮಾಡಿದ್ದರು. ಬಳಿಕ ಟೂಲ್‌ಕಿಟ್ ಹಂಚಿಕೆಯ ಸಂಬಂಧ ದೆಹಲಿ ಪೊಲೀಸರು ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.