ADVERTISEMENT

2026ನೇ ಸಾಲಿಗೆ H-1B ವಿಸಾ ನೋಂದಣಿ ಮಾರ್ಚ್‌ 7ರಿಂದ ಆರಂಭ: USCIS

ಪಿಟಿಐ
Published 7 ಫೆಬ್ರುವರಿ 2025, 5:03 IST
Last Updated 7 ಫೆಬ್ರುವರಿ 2025, 5:03 IST
H-1B visa
H-1B visa   

ನ್ಯೂಯಾರ್ಕ್‌: ‘ಅಮೆರಿಕದಲ್ಲಿ ಕೆಲಸ ಮಾಡಬಯಸುವ ಭಾರತೀಯ ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಎಚ್‌–1ಬಿ ವಿಸಾ ಪಡೆಯಲು 2026ನೇ ಸಾಲಿಗೆ ನೋಂದಣಿ ಪ್ರಕ್ರಿಯೆಯು ಮಾರ್ಚ್‌ 7ರಿಂದ ಆರಂಭವಾಗಲಿದೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ಹೇಳಿದೆ. 

ಈ ನೋಂದಣಿ ಅವಧಿಯು ಮಾರ್ಚ್ 24ರಂದು ಕೊನೆಗೊಳ್ಳಲಿದೆ. ವಿಷಯ ಹಾಗೂ ತಾಂತ್ರಿಕ ಕೌಶಲ ಹೊಂದಿರುವ ವಿದೇಶಗಳ ನಿರ್ದಿಷ್ಟ ಉದ್ಯೋಗದ ಅನುಭವಿಗಳನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗೆ ಅವಕಾಶ ಕಲ್ಪಿಸುವ ವಲಸೆ ಅಲ್ಲದ ವಿಸಾ ಎಚ್‌–1ಬಿ ಇದಾಗಿದೆ. ತಾಂತ್ರಿಕ ಪರಿಣತಿ ಹೊಂದಿರುವ ಸಾವಿರಾರು ನೌಕರರನ್ನು ಅಮೆರಿಕದ ತಂತ್ರಜ್ಞಾನ ಕಂಪನಿಗಳು ಪ್ರತಿವರ್ಷ ಚೀನಾ ಮತ್ತು ಭಾರತದಿಂದ ಈ ವಿಸಾ ಆಧಾರದಲ್ಲಿ ಕರೆಯಿಸಿಕೊಳ್ಳುತ್ತಿವೆ.

‘ನೋಂದಣಿಯು ಮಾರ್ಚ್‌ 7ರಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10.30ಕ್ಕೆ ಆರಂಭವಾಗಲಿದೆ. ಮಾರ್ಚ್‌ 24ರಂದು ರಾತ್ರಿ 10.30ಕ್ಕೆ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ವಿಸಾ ಬಯಸುವವರು USCISನ ಆನ್‌ಲೈನ್‌ ಖಾತೆ ಮೂಲಕವೇ ಅಗತ್ಯ ಶುಲ್ಕ ಹಾಗೂ ದಾಖಲೆಗಳೊಂದಿಗೆ ಪ್ರತಿಯೊಬ್ಬ ನೌಕರನ ಹೆಸರನ್ನು ನೋಂದಾಯಿಸಬೇಕು’ ಎಂದು USCIS ಹೇಳಿದೆ.

ADVERTISEMENT

ನೋಂದಣಿ ಶುಲ್ಕ 215 ಅಮೆರಿಕನ್ ಡಾಲರ್

ವಿಸಾ ಮಂಜೂರಿಗೆ ಫಲಾನುಭವಿ ಕೇಂದ್ರಿತ ಆಯ್ಕೆ ವ್ಯವಸ್ಥೆಯನ್ನು 2025ರಿಂದ ಅಳವಡಿಸಿಕೊಳ್ಳಲಾಗಿದೆ. 2026ನೇ ಸಾಲಿಗೂ ಇದೇ ವ್ಯವಸ್ಥೆ ಮುಂದುವರಿಯಲಿದೆ. ಅಮೆರಿಕದ ಆರ್ಥಿಕ ವರ್ಷ ಅ. 1ರಿಂದ ಆರಂಭವಾಗಲಿದೆ.

ಜಗತ್ತಿನಲ್ಲಿರುವ ಉತ್ತಮ ಪ್ರತಿಭೆಗಳನ್ನು ಅಮೆರಿಕ ತನ್ನತ್ತ ಸೆಳೆಯುತ್ತಿದ್ದು, ಎಚ್‌–1ಬಿ ವಿಸಾದ ಪ್ರಮುಖ ಫಲಾನುಭವಿಗಳು ಭಾರತೀಯರೇ ಆಗಿದ್ದಾರೆ. ಹೀಗೆ ವಿಸಾ ಪಡೆಯುವ ಭಾರತೀಯರ ಸಂಖ್ಯೆ ಪ್ರತಿ ವರ್ಷ 6.5 ಲಕ್ಷ. ಅಮೆರಿಕದಲ್ಲೇ ಉನ್ನತ ವ್ಯಾಸಂಗ ನಡೆಸಿ ಎಚ್‌–1ಬಿ ವಿಸಾ ಪಡೆಯುತ್ತಿರುವ ಭಾರತೀಯರ ಸಂಖ್ಯೆ 20 ಸಾವಿರ. ನೋಂದಣಿ ಶುಲ್ಕವು 215 ಅಮೆರಿಕನ್ ಡಾಲರ್‌ನಷ್ಟಾಗಿದೆ. (ಸುಮಾರು ₹18,500)

ಫಲಾನುಭವಿ ಕೇಂದ್ರಿತ ಆಯ್ಕೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆಯು ವಂಚನೆ ತಡೆಗಟ್ಟಲು ಮುಂದಾಗಿದೆ. ಹೀಗಾಗಿ ಕಂಪನಿಗಳು ನೋಂದಾಯಿಸಿದವರಿಗೆಲ್ಲಾ ವಿಸಾ ನೀಡುವ ಪದ್ಧತಿಯನ್ನು ಕೈಬಿಟ್ಟಿದೆ. ಮಾರ್ಚ್ 24ರಂದು ನೋಂದಣಿ ಅವಧಿ ಪೂರ್ಣಗೊಂಡ ನಂತರ, ಉದ್ಯೋಗಿಗಳ ಜ್ಞಾನ ಮತ್ತು ಕೌಶಲವನ್ನು ಆಧರಿಸಿ USCIS ಆನ್‌ಲೈನ್ ಖಾತೆಯು ವಿಸಾ ಕಳುಹಿಸಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.