ADVERTISEMENT

ಕೋವಿಡ್–19: ಐದನೇ ಬಾರಿ ಏರ್‌ ಇಂಡಿಯಾ ವಿಮಾನ ನಿಷೇಧಿಸಿದ ಹಾಂಕಾಂಗ್

ಪಿಟಿಐ
Published 21 ನವೆಂಬರ್ 2020, 4:05 IST
Last Updated 21 ನವೆಂಬರ್ 2020, 4:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಕಾಂಗ್: ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಕಾರಣ ದೆಹಲಿಯಿಂದ ಬರುವ ಏರ್ ಇಂಡಿಯಾ ವಿಮಾನಗಳ ಮೇಲೆ ಡಿಸೆಂಬರ್ 3ರ ವರೆಗೆ ಹಾಂಕಾಂಗ್ ನಿಷೇಧ ಹೇರಿದೆ. ಈ ವಾರದ ಆರಂಭದಲ್ಲಿ ದೆಹಲಿಯಿಂದ ಬಂದ ಕೆಲವು ಪ್ರಯಾಣಿಕರಲ್ಲಿ ಕೋವಿಡ್ ದೃಢಪಟ್ಟಿತ್ತು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಂಕಾಂಗ್ ಸರ್ಕಾರವು ಏರ್ ಇಂಡಿಯಾ ವಿಮಾನಕ್ಕೆ ನಿರ್ಬಂಧ ಹೇರುತ್ತಿರುವುದು ಇದು ಐದನೇ ಬಾರಿ.

ಈ ಹಿಂದೆ ಆಗಸ್ಟ್ 18ರಿಂದ 31ರ ವರೆಗೆ, ಸೆಪ್ಟೆಂಬರ್ 20ರಿಂದ ಅಕ್ಟೋಬರ್ 3ರ ವರೆಗೆ, ಅಕ್ಟೋಬರ್ 17ರಿಂದ ಅಕ್ಟೋಬರ್‌ 30ರ ವರೆಗೆ ದೆಹಲಿಯಿಂದ ಬರುವ ಮತ್ತು ಅಕ್ಟೋಬರ್ 28ರಿಂದ ನವೆಂಬರ್‌ 10ರ ವರೆಗೆ ಮುಂಬೈಯಿಂದ ಬರುವ ಏರ್ ಇಂಡಿಯಾ ವಿಮಾನಗಳನ್ನು ಹಾಂಕಾಂಗ್ ನಿಷೇಧಿಸಿತ್ತು.

ADVERTISEMENT

ಭಾರತದಿಂದ ಬರುವ ಪ್ರಯಾಣಿಕರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಪರೀಕ್ಷೆ ನಡೆಸಿ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹೊಂದಿರಬೇಕು ಎಂದು ಹಾಂಕಾಂಗ್‌ ಸರ್ಕಾರ ಜುಲೈನಲ್ಲಿ ನಿಯಮ ರೂಪಿಸಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಕಾಂಗ್‌ಗೆ ಬಂದ ನಂತರ ಕೋವಿಡ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ.

ಭಾರತ ಮಾತ್ರವಲ್ಲದೆ ಬಾಂಗ್ಲಾದೇಶ, ಇಥಿಯೋಪಿಯ, ಫ್ರಾನ್ಸ್‌, ಇಂಡೊನೇಷ್ಯಾ, ಕಜಕ್‌ಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪ್ಪೀನ್ಸ್‌, ರಷ್ಯಾ, ದಕ್ಷಿಣ ಆಫ್ರಿಕಾ, ಬ್ರಿಟನ್‌ ಹಾಗೂ ಅಮೆರಿಕದಿಂದ ಬರುವ ಪ್ರಯಾಣಿಕರೂ ಪ್ರಯಾಣಪೂರ್ವ ಕೋವಿಡ್‌ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಹಾಂಕಾಂಗ್ ನಿಯಮದ ಪ್ರಕಾರ ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.