ADVERTISEMENT

ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌–1ಬಿ ವೀಸಾ ಮೇಲಿನ ನಿಷೇಧ ತೆರವು: ಬಿಡೆನ್

ಪಿಟಿಐ
Published 2 ಜುಲೈ 2020, 8:27 IST
Last Updated 2 ಜುಲೈ 2020, 8:27 IST
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌    

ವಾಷಿಂಗ್ಟನ್‌: ಇದೇ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ವೃತ್ತಿ ಆಧಾರಿತ ಹೊಸ ವೀಸಾಗಳ (ಎಚ್‌–1ಬಿ) ಮೇಲಿನ ತಾತ್ಕಾಲಿಕ ನಿಷೇಧವನ್ನು ತೆರವು ಮಾಡುವುದಾಗಿ ಅಧ್ಯಕ್ಷೀಯ ಚುನಾವಣೆಯ ಡೆಮಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಹೇಳಿದ್ದಾರೆ.

ಅಮೆರಿಕದಲ್ಲಿ ಉದ್ಯೋಗ ಕಂಡುಕೊಳ್ಳಬೇಕೆಂಬ ಭಾರತೀಯ ಐಟಿ ವೃತ್ತಿಪರರಿಗೆ ಎಚ್‌–1ಬಿ ವಿಸಾ ಅನಿವಾರ್ಯ. ಆದರೆ, ಉದ್ಯೋಗಕ್ಕಾಗಿ ಅಮೆರಿಕ ಪ್ರವೇಶಿಸುವ ವಲಸಿಗರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸದ್ಯ ಟ್ರಂಪ್‌ ಸರ್ಕಾರ ಎಚ್‌1ಬಿ ವಿಸಾ ನೀಡುವುದನ್ನು ಜೂನ್‌ 23ರಿಂದ ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದೆ.

ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ (ಎಎಪಿಐ) ವಿಷಯಗಳ ಕುರಿತು ಎನ್‌ಬಿಸಿ ನ್ಯೂಸ್ ಆಯೋಜಿಸಿದ್ದ ಡಿಜಿಟಲ್ ಟೌನ್ ಹಾಲ್ ಸಭೆಯಲ್ಲಿ ಮಾತನಾಡಿರುವ ಬಿಡೆನ್, ಎಚ್-1 ಬಿ ವೀಸಾ ಮೇಲೆ ಬಂದವರು ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ADVERTISEMENT

ಎಚ್‌–1ಬಿ ವೀಸಾ ಸೇರಿದಂತೆ ಇತರೆ ವಿದೇಶಿ ವೃತ್ತಿ ಆಧಾರಿತ ವೀಸಾಗಳ ಮೇಲೆ ಟ್ರಂಪ್‌ ಸರ್ಕಾರ ವಿಧಿಸಿರುವ ನಿರ್ಬಂಧದ ಕುರಿತು ಮಾತನಾಡುತ್ತಿದ್ದ ಅವರು, ‘ ಅವರು (ಅಧ್ಯಕ್ಷ ಡೊನಾಲ್ಡ್ ಟ್ರಂಪ್) ಈ ವರ್ಷದ ಮಿಕ್ಕುಳಿದ ಅವಧಿಯಲ್ಲಿ ಎಚ್ -1 ಬಿ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ. ಅದು ನನ್ನ ಆಡಳಿತದಲ್ಲಿ ಇರುವುದಿಲ್ಲ’ ಎಂದು 77 ವರ್ಷದ ಬಿಡೆನ್ ಟೌನ್ ಹಾಲ್ ಸಭೆಯಲ್ಲಿ ಹೇಳಿದರು.
‘ಕಂಪನಿ ವೀಸಾದ ಮೇಲೆ ಬಂದ ಜನರು ದೇಶವನ್ನು ನಿರ್ಮಿಸಿದ್ದಾರೆ’ ಎಂದೂ ಬಿಡೆನ್‌ ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಡೆನ್‌, ‘ಅಧ್ಯಕ್ಷ ಸ್ಥಾನಕ್ಕೆ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಗೆದ್ದರೆ, ಆಡಳಿತದಲ್ಲಿ ಭಾರತದ ಜೊತೆಗಿನ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.