ಯೂನ್ ಸೂಕ್ ಯೋಲ್, ಬಂಧನ ವಿರೋಧಿಸಿ ಬೆಂಬಲಿಗರ ಪ್ರತಿಭಟನೆ
ಸಿಯೋಲ್: ಸೇನಾ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ದೋಷಾರೋಪಣೆಗೆ ಒಳಗಾಗಿರುವ ದಕ್ಷಿಣ ಕೊರಿಯಾ ಅದ್ಯಕ್ಷ ಯೂನ್ ಸೂಕ್ ಯೋಲ್ ಅವರ ವಿಚಾರಣೆ ನಂತರ, ಬುಧವಾರ ಕಾರಾಗೃಹಕ್ಕೆ ಕಳುಹಿಸಲಾಯಿತು. ಆ ಮೂಲಕ ದೇಶದ ಇತಿಹಾಸದಲ್ಲೇ ಬಂಧನಕ್ಕೊಳಗಾದ ಮೊದಲ ಅಧ್ಯಕ್ಷ ಯೂನ್ ಆಗಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಕ್ರಮವಾಗಿ ಸೇನಾ ಕಾನೂನನ್ನು ಜಾರಿಗೆ ತಂದ ಆರೋಪ ಇವರ ಮೇಲಿದೆ. ಉತ್ತರ ಕೊರಿಯಾದ ದಾಳಿಯಿಂದ ರಕ್ಷಿಸುವ ಉದ್ದೇಶದೊಂದಿಗೆ ಹಾಗೂ ದೇಶದಲ್ಲಿ ರಕ್ತಪಾತ ತಡೆಯುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಯೂನ್ ಹೇಳಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಅವರ ವಿರುದ್ಧದ ದೋಷಾರೋಪ ಸಾಬೀತಾದಲ್ಲಿ, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅವರು ಗುರಿಯಾಗಬೇಕಾಗುತ್ತದೆ ಎಂದೆನ್ನಲಾಗಿದೆ. 2022ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಾಸಿಕ್ಯೂಟರ್ ಆಗಿದ್ದ ಯೂನ್ ಅವರು ಪೀಪಲ್ ಪವರ್ ಪಾರ್ಟಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತನಗೆ ನಿಷ್ಠರಾಗಿದ್ದ ಅಧ್ಯಕ್ಷೀಯ ಭದ್ರತಾ ಸಿಬ್ಬಂದಿಯ ನೆಪವೊಡ್ಡಿ ತನ್ನ ಮನೆಯ ಆವರಣದಲ್ಲಿ ಬಂಧನಕ್ಕೊಳಗಾಗುವ ನೆಪವೊಡ್ಡಿ, ಕಾರಾಗೃಹ ಸೇರುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದಕ್ಕಾಗಿ ಮುಳ್ಳಿನ ಬೇಲಿ ಹಾಗೂ ತಡೆಗೋಡೆಗಳನ್ನು ಮನೆ ಸುತ್ತಲೂ ಹಾಕಿಸಿದ್ದರು.
ಆದರೆ ಯೂನ್ ಬಂಧನಕ್ಕೆ ಪಣತೊಟ್ಟ ತನಿಖಾಧಿಕಾರಿಗಳು, ತಡೆಗೋಡೆಗಳನ್ನು ತೆರವುಗೊಳಿಸಿ, ಮುಳ್ಳಿನ ತಂತಿಗಳನ್ನು ಕತ್ತರಿಸಿ, ಮನೆಯೊಳಗೆ ನುಗ್ಗಿದರು. ಭ್ರಷ್ಟಾಚಾರ ತನಿಖಾ ದಳಕ್ಕೆ ಸೇರಿದ ನೂರಾರು ಸಂಖ್ಯೆಯ ಪೊಲೀಸರು ಮನೆಯನ್ನು ಸುತ್ತುವರಿದಿದ್ದರು. ಸುಮಾರು ಐದು ಗಂಟೆಗಳ ಕಾರ್ಯಾಚರಣೆ ನಂತರ, ಯೂನ್ ಬಂಧನವಾಯಿತೆಂದು ಅಧಿಕಾರಿಗಳು ಘೋಷಿಸಿದರು.
ವಿಚಾರಣೆಯ ಚಿತ್ರೀಕರಣಕ್ಕೆ ಯೂನ್ ನಿರಾಕರಿಸಿದರು. ಬಂಧನದ ನಂತರ ಯೂನ್ ಬೆಂಬಲಿಗನೊಬ್ಬ ತನ್ನನ್ನು ದಹಿಸಿಕೊಳ್ಳಲು ಯತ್ನಿಸಿದ ಎಂದು ವರದಿಯಾಗಿದೆ. ಇದೊಂದು ಅಕ್ರಮ ಬಂಧನ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.