ADVERTISEMENT

'ಆಮದು ಸರ್ಕಾರ'ವನ್ನು ಒಪ್ಪಿಕೊಳ್ಳುವುದಿಲ್ಲ; ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪಿಟಿಐ
Published 9 ಏಪ್ರಿಲ್ 2022, 2:35 IST
Last Updated 9 ಏಪ್ರಿಲ್ 2022, 2:35 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್: ಭಾನುವಾರ 'ಹೊಸ ಆಮದು ಸರ್ಕಾರ' ಅಧಿಕಾರಕ್ಕೆ ಬಂದಾಗ, ದೇಶದಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವಂತೆ ತನ್ನ ಬೆಂಬಲಿಗರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡುತ್ತಾರೆ.

ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ 69 ವರ್ಷದ ಖಾನ್ ಅವರು, ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಉಪ ಸ್ಪೀಕರ್‌ ಖಾಸಿಂ ಸೂರಿ ಅವರ ನಿರ್ಧಾರದ ಕುರಿತು ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನಾನು ಈ ಆಮದು ಮಾಡಿಕೊಂಡ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ, ನಾನು ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇನೆ... ಜನರು ಮಾತ್ರ ನನ್ನನ್ನು ಅಧಿಕಾರಕ್ಕೆ ತರಬಹುದು ಮತ್ತು ಜನರ ಸಹಾಯದಿಂದ ನಾನು ಮತ್ತೆ ಬರುತ್ತೇನೆ. ಭಾನುವಾರ ಸಂಜೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನನ್ನ ಬೆಂಬಲಿಗರು ಹೊರಗೆ ಬರಬೇಕು' ಎಂದು ಅವರು ಹೇಳಿದರು.

ADVERTISEMENT

ಸರ್ಕಾರವನ್ನು ಕಿತ್ತೊಗೆಯುವ ವಿದೇಶಿ ಷಡ್ಯಂತ್ರವನ್ನು ತಿರಸ್ಕರಿಸಲು ಜನರು ಹೊರಗೆ ಬರುವಂತೆ ಕೇಳಿಕೊಂಡರು. 'ನೀವು ಎದ್ದು ನಿಲ್ಲದಿದ್ದರೆ, ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ' ಎಂದು ಅವರು ಹೇಳಿದರು.

'ಚುನಾವಣೆಗಳನ್ನು ಘೋಷಿಸಲು ಇಚ್ಛಿಸಿರುವ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ ಅವರು, 'ಜನರು ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕೆಂದೇ ನಾನು ಕೂಡ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ. ನಾನು ಹೋರಾಟಕ್ಕೆ ಸಿದ್ಧನಿದ್ದೇನೆ... ಶಾಂತಿಯುತ ಪ್ರತಿಭಟನೆಯಲ್ಲಿ ನನ್ನೊಂದಿಗೆ ಕೈಜೋಡಿಸಿ' ಎಂದರು.

ಪ್ರಧಾನಿ ಇಮ್ರಾನ್‌ ಖಾನ್‌ ಅಧಿಕಾರ ಉಳಿಸಿಕೊಳ್ಳಲು 342 ಸದಸ್ಯ ಬಲದ ಸಂಸತ್ತಿನಲ್ಲಿ 172 ಮತಗಳನ್ನು ಪಡೆಯುವುದು ಅನಿವಾರ್ಯವಾಗಿತ್ತು. ಆಡಳಿತಾರೂಢ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದ 23 ಸದಸ್ಯರು ಇಮ್ರಾನ್‌ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ. ಆದರೆ ವಿರೋಧ ಪಕ್ಷಗಳು ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಬೆಂಬಲವನ್ನು ಹೊಂದಿವೆ.

ಪಾಕಿಸ್ತಾನದ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯದಲ್ಲಿ ಮತ ಚಲಾಯಿಸಿದ ಮೊದಲ ಪ್ರಧಾನಿಯಾಗುವ ಸಾಧ್ಯತೆಯನ್ನು ಇಮ್ರಾನ್ ಖಾನ್ ಎದುರಿಸುತ್ತಿದ್ದಾರೆ.

ಉಪ ಸ್ಪೀಕರ್‌ ಅವರ ನಿರ್ಧಾರ ಮತ್ತು ಸಂಸತ್ತು ವಿಸರ್ಜನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡಿತ್ತು. ಇಮ್ರಾನ್‌ ನೇತೃತ್ವದ ಮೈತ್ರಿಕೂಟದ ಕೆಲವು ಪಕ್ಷಗಳು ಮೈತ್ರಿಕೂಟ ತೊರೆದಿವೆ. ಹಾಗಾಗಿ, ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತ ನಷ್ಟವಾಗಿದೆ. ಕಳೆದ ವಾರ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದ್ದರೆ ಇಮ್ರಾನ್‌ ಸೋಲುವುದು ನಿಚ್ಚಳ ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.