ADVERTISEMENT

ಉಕ್ರೇನ್ ಇನ್ಮುಂದೆ ನ್ಯಾಟೊ ಸದಸ್ಯತ್ವಕ್ಕೆ ಒತ್ತಾಯಿಸುವುದಿಲ್ಲ- ಝೆಲೆನ್‌ಸ್ಕಿ

ಏಜೆನ್ಸೀಸ್
Published 9 ಮಾರ್ಚ್ 2022, 4:53 IST
Last Updated 9 ಮಾರ್ಚ್ 2022, 4:53 IST
ವೊಲೊಡಿಮಿರ್ ಝೆಲೆನ್‌ಸ್ಕಿ
ವೊಲೊಡಿಮಿರ್ ಝೆಲೆನ್‌ಸ್ಕಿ   

ವಾಷಿಂಗ್ಟನ್: ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವಕ್ಕಾಗಿ ಇನ್ಮುಂದೆ ಒತ್ತಾಯಿಸುವುದಿಲ್ಲ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಇದು ಸೂಕ್ಷ್ಮವಾದ ವಿಚಾರವಾಗಿದ್ದು, ತನ್ನ ನೆರೆಯ ದೇಶದ ಮೇಲೆ ಆಕ್ರಮಣ ಮಾಡಲು ರಷ್ಯಾ ಹೇಳಿದ ಕಾರಣಗಳಲ್ಲಿ ಇದು ಒಂದಾಗಿದೆ ಎಂದಿದ್ದಾರೆ.

ಡೊನೆಟ್‌ಸ್ಕ್ ಮತ್ತು ಲುಗಾನ್‌ಸ್ಕ್ ಪ್ರದೇಶಗಳನ್ನು ಸ್ವಾಯತ್ತ ಪ್ರಾಂತ್ಯಗಳೆಂದು ಗುರುತಿಸಬೇಕು ಎಂಬುದು ರಷ್ಯಾದ ಬೇಡಿಕೆಯಾಗಿದೆ. ಈ ಕುರಿತಂತೆ ಉಕ್ರೇನ್ ಮೇಲಿನ ಆಕ್ರಮಣ ಆರಂಭಕ್ಕೂ ಮುನ್ನ ರಷ್ಯಾ ಅಧ್ಯಕ್ಷ ಪುಟಿನ್ ಮಾಡಿದ್ದ ಘೋಷಣೆಯನ್ನು ಒಪ್ಪಿಕೊಳ್ಳುವುದಾಗಿ ಹೇಳುವ ಮೂಲಕ ಝೆಲೆನ್‌ಸ್ಕಿ, ಮಾಸ್ಕೋವನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದ್ದಾರೆ.

'ಇದನ್ನು ಅರ್ಥಮಾಡಿಕೊಂಡ ನಂತರ ಬಹಳ ಹಿಂದೆಯೇ ಈ ಪ್ರಶ್ನೆಗೆ ಸಂಬಂಧಿಸಿದಂತೆ ನಾನು ಸುಮ್ಮನಾಗಿದ್ದೇನೆ. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (NATO) ಉಕ್ರೇನ್ ಅನ್ನು ಸ್ವೀಕರಿಸಲು ಇನ್ನೂ ಸಿದ್ಧವಾಗಿಲ್ಲ' ಎಂದು ಎಬಿಸಿ ನ್ಯೂಸ್‌ನಲ್ಲಿ ಸೋಮವಾರ ರಾತ್ರಿ ಪ್ರಸಾರವಾದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ADVERTISEMENT

'ನ್ಯಾಟೋ ವಿವಾದಿತ ಸಂಗತಿಗಳಿಂದ ದೂರ ಉಳಿದಿದ್ದು, ರಷ್ಯಾ ಜೊತೆಗಿನ ಸಂಘರ್ಷಕ್ಕೆ ಹೆದರುತ್ತಿದೆ ಎಂದ ಝೆಲೆನ್‌ಸ್ಕಿ, ನ್ಯಾಟೊ ಸದಸ್ಯತ್ವವನ್ನು ಉಲ್ಲೇಖಿಸಿ, ಮಂಡಿಯೂರಿ ಏನನ್ನಾದರೂ ಬೇಡಿಕೊಳ್ಳುವ ದೇಶದ ಅಧ್ಯಕ್ಷರಾಗಿರಲು ನಾನು ಬಯಸುವುದಿಲ್ಲ' ಎಂದು ಹೇಳಿದರು.

ಸೋವಿಯತ್ ಒಕ್ಕೂಟದಿಂದ ಯುರೋಪ್ ಅನ್ನು ರಕ್ಷಿಸಲು ಶೀತಲ ಸಮರದ ಪ್ರಾರಂಭದಲ್ಲಿ ರಚಿಸಲಾದ ನ್ಯಾಟೊಗೆ ನೆರೆಯ ಉಕ್ರೇನ್ ಸೇರುವುದನ್ನು ಬಯಸುವುದಿಲ್ಲ ಎಂದು ರಷ್ಯಾ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಈ ಒಕ್ಕೂಟವು ಹಿಂದಿನ ಸೋವಿಯತ್ ದೇಶಗಳಿಗೆ ಸದಸ್ಯತ್ವ ನೀಡಲು ಪೂರ್ವಕ್ಕೆ ವಿಸ್ತರಿಸಿಕೊಂಡಿರುವುದು ರಷ್ಯಾವನ್ನು ಕೆರಳಿಸಿದೆ.

ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು. ಉಕ್ರೇನ್ ಕೂಡ ತಮ್ಮನ್ನು ಸಾರ್ವಭೌಮ ಮತ್ತು ಸ್ವತಂತ್ರ ಎಂದು ಗುರುತಿಸಿಕೊಳ್ಳಲಿ ಎಂದು ಪುಟಿನ್ ಬಯಸಿದ್ದಾರೆ.

ರಷ್ಯಾದ ಈ ಬೇಡಿಕೆಯ ಬಗ್ಗೆ ಎಬಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಝೆಲೆನ್‌ಸ್ಕಿ, ತಾವು ಮಾತುಕತೆಗೆ ಮುಕ್ತರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ನಾನು ಭದ್ರತಾ ಖಾತರಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎರಡು ಪ್ರದೇಶಗಳು ಮುಂದೆ ಹೇಗಿರಬೇಕು ಎನ್ನುವ ಕುರಿತು ನಾವು ಚರ್ಚಿಸಬಹುದು ಮತ್ತು ರಾಜಿ ಮಾಡಿಕೊಳ್ಳಬಹುದು' ಎಂದು ಅವರು ಹೇಳಿದ್ದಾರೆ.

'ಉಕ್ರೇನ್‌ನ ಭಾಗವಾಗಲು ಬಯಸುವ, ಉಕ್ರೇನ್‌ನಲ್ಲಿ ಇರುವ ಆ ಪ್ರಾಂತ್ಯಗಳಲ್ಲಿನ ಜನರು ಹೇಗೆ ಬದುಕುತ್ತಾರೆ ಎಂಬುದು ನನಗೆ ಮುಖ್ಯವಾದುದು. ಆದ್ದರಿಂದ ಈ ಪ್ರಶ್ನೆಯನ್ನು ಸರಳವಾಗಿ ಒಪ್ಪಿಕೊಳ್ಳುವುದು ಹೆಚ್ಚು ಕಷ್ಟವಾಗಿದೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.